ADVERTISEMENT

ಇದು ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 19:38 IST
Last Updated 8 ಆಗಸ್ಟ್ 2018, 19:38 IST
ನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ‘ಸೇವ್‌ ದ ಚಿಲ್ಡ್ರನ್’ ಸಂಸ್ಥೆ ಆಯೊಜಿಸಿದ್ದ ‘ಸಾರ್ವಜನಿಕ ಸ್ಥಳಗಳಲ್ಲಿ ಬಾಲಕಿಯರ ಸುರಕ್ಷತೆಯ ಗ್ರಹಿಕೆ ಕುರಿತು ಒಂದು ಅಧ್ಯಯನ’ ವರದಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್, ಕೃಪಾ ಆಳ್ವ, ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಹಾಗೂ ನಟ ಶ್ರೀಮುರಳಿ ಇದ್ದರು –ಪ್ರಜಾವಾಣಿ ಚಿತ್ರ
ನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ‘ಸೇವ್‌ ದ ಚಿಲ್ಡ್ರನ್’ ಸಂಸ್ಥೆ ಆಯೊಜಿಸಿದ್ದ ‘ಸಾರ್ವಜನಿಕ ಸ್ಥಳಗಳಲ್ಲಿ ಬಾಲಕಿಯರ ಸುರಕ್ಷತೆಯ ಗ್ರಹಿಕೆ ಕುರಿತು ಒಂದು ಅಧ್ಯಯನ’ ವರದಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್, ಕೃಪಾ ಆಳ್ವ, ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಹಾಗೂ ನಟ ಶ್ರೀಮುರಳಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:ದಿ ವರ್ಲ್ಡ್‌ ಆಫ್‌ ಇಂಡಿಯಾಸ್‌ ಗರ್ಲ್ಸ್, ಸೇವ್‌ ದಿ ಚಿಲ್ಡ್ರನ್‌ ಸಂಸ್ಥೆ ವತಿಯಿಂದ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತ ವಿಚಾರ ಸಂಕಿರಣ, ಸಮೀಕ್ಷಾ ವರದಿ ಬಿಡುಗಡೆ ನಡೆಯಿತು.

ರಾಜ್ಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಸಂಬಂಧಿಸಿದಂತೆ ವಿಂಗ್ಸ್‌ –2018 (ದಿ ವರ್ಲ್ಡ್‌ ಆಫ್‌ ಇಂಡಿಯಾಸ್‌ ಗರ್ಲ್ಸ್; ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ಗ್ರಹಿಕೆ) ನಡೆಸಿದ ಆನ್‌ಲೈನ್‌ ಸಮೀಕ್ಷೆಯಲ್ಲಿ ಜನರಿಗೆ ಸುರಕ್ಷತೆ, ರಕ್ಷಣಾ ವ್ಯವಸ್ಥೆಗಳ ಬಗೆಗಿರುವ ಅರಿವು ಸಂಬಂಧಿಸಿ ಹಲವು ಹೊಸ ವಿಚಾರಗಳು ಹೊರಬಂದಿವೆ. ಸಮೀಕ್ಷೆಯಲ್ಲಿ 15ರಿಂದ 18, 18ರಿಂದ 25, 25ರಿಂದ 30, 30ರಿಂದ 35, 35ಕ್ಕಿಂತ ಮೇಲ್ಪಟ್ಟವರು... ಹೀಗೆ ವಯೋಮಾನವಾರು ವಿಂಗಡಿಸಿ ಸಂದರ್ಶಿಸಲಾಗಿತ್ತು. ಇಡೀ ಸಮೀಕ್ಷೆಯ ಸಂಕ್ಷಿಪ್ತ ಸಾರ ನೋಟ ಹೀಗಿದೆ.

2,966

ADVERTISEMENT

ಆನ್‌ಲೈನ್‌ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರು

ಶೇ 86.4 ಮಹಿಳೆಯರು

ಶೇ 71.7 ಪುರುಷರು

ಸಾರ್ವಜನಿಕ ಸಾರಿಗೆ ಪ್ರಯಾಣದಲ್ಲಿ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂಬ ಮನೋಭಾವ ಹೊಂದಿರುವವರು

(ನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ‘ಸೇವ್‌ ದ ಚಿಲ್ಡ್ರನ್’ ಸಂಸ್ಥೆ ಆಯೊಜಿಸಿದ್ದ “ಸಾರ್ವಜನಿಕ ಸ್ಥಳಗಳಲ್ಲಿ ಬಾಲಕಿಯರ ಸುರಕ್ಷತೆಯ ಗ್ರಹಿಕೆ ಕುರಿತು ಒಂದು ಅಧ್ಯಯನ” ವರದಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ)

ಶೇ 95.1 ಮಹಿಳೆಯರು

ಶೇ 92 ಪುರುಷರು

ಲೈಂಗಿಕ ಕಿರುಕುಳ ಹೆಣ್ಣುಮಕ್ಕಳಿಗೆ ಆತಂಕಕಾರಿ ಎಂದು ಭಾವಿಸಿರುವವರು

ಶೇ 82.8 ಮಹಿಳೆಯರು

ಶೇ 74.8 ಪುರುಷರು

ಬಾಲಕಿ ಕಿರುಕುಳಕ್ಕೊಳಗಾದದ್ದು ತಿಳಿದರೆ ಅವಳ ಚಲನವಲನಗಳನ್ನು ಕುಟುಂಬದವರು ನಿರ್ಬಂಧಿಸುತ್ತಾರೆ ಎಂದು ಭಾವಿಸಿದವರು

ಶೇ 85.6 ಮಹಿಳೆಯರು

86.7 ಪುರುಷರು

ಕಿರುಕುಳ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೆಣ್ಣುಮಕ್ಕಳಿಗೆ ಮುಕ್ತ ವಾತಾವರಣ ಇಲ್ಲ ಎಂದು ಭಾವಿಸಿರುವವರು

ಶೇ 65.1 ಮಹಿಳೆಯರು

ಶೇ 61.9 ಪುರುಷರು

ಅಸುರಕ್ಷಿತ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಂಪರ್ಕಿಸಬೇಕು ಎಂಬ ಅರಿವೇ ಇಲ್ಲ ಎಂದು ಭಾವಿಸಿರುವವರು

ಶೇ 92.4 ಮಹಿಳೆಯರು

ಶೇ 83.2 ಪುರುಷರು

ಹೆಣ್ಣುಮಕ್ಕಳು ಸಾಮಾಜಿಕ ಮಾಧ್ಯಮಗಳ ಮೂಲಕವೂ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ಭಾವಿಸಿರುವವರು

ದೂರು ನೀಡಲು ಹಿಂಜರಿಕೆ

ಎಲ್ಲ ಸಂಬಂಧಗಳಿಂದ ಬಂಧಿಸಲ್ಪಟ್ಟಿರುವ ನಾವು ಮಾನವೀಯತೆಯಿಂದ ದೂರ ಉಳಿದಿದ್ದೇವೆ. ಕುಟುಂಬದೊಳಗೇ ಕಿರುಕುಳಗಳು ನಡೆದಾಗ ಮರ್ಯಾದೆಗೆ ಹೆದರಿ ದೂರು ನೀಡಲೂ ಮುಂದಾಗುವುದಿಲ್ಲ. ಹೀಗಾಗಿ ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ನ್ಯಾಯಾಲಯದಲ್ಲಿ ಕೇಳುವ ಪ್ರಶ್ನೆಗಳು ಕೂಡಾ ಸಂತ್ರಸ್ತೆ ಮತ್ತೆ ಆ ಕರಾಳ ಸಂದರ್ಭಕ್ಕೆ ಒಳಗಾದಂತೆ ಮಾಡಲಾಗುತ್ತಿದೆ. ಇದು ಬದಲಾಗಬೇಕು.

– ಕೃಪಾ ಆಳ್ವ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ

ಗಂಡಸರ ಜನ್ಮಕ್ಕೆ ಅವಮಾನ

ಹೆಣ್ಣುಮಕ್ಕಳು ಅಸುರಕ್ಷಿತವಾಗಿರುವುದು ಗಂಡಸರ ಜನ್ಮಕ್ಕೆ ಅವಮಾನ. ಕೆಟ್ಟದ್ದನ್ನು ಹೇಳಿಕೊಟ್ಟವರು ಯಾರು? ಅತ್ಯಾಚಾರಿಯನ್ನು ಪರೀಕ್ಷೆ, ವಿಚಾರಣೆಗೊಳಪಡಿಸಿ ಏನು ಮಾಡುತ್ತೀರಿ? ಅಂಥವರಿಗೆ ವಿಳಂಬ ಮಾಡದೇ ತಕ್ಕ ಶಾಸ್ತಿ ಮಾಡಬೇಕು. ಪ್ರತಿಭಟಿಸುವ ಗುಣವನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು.

– ಶ್ರೀಮುರಳಿ, ನಟ

ದೂರು ನೀಡಲು ಹಿಂಜರಿಯದಿರಿ

ಹೆಣ್ಣುಮಕ್ಕಳ ಮೇಲೆ ಕಿರುಕುಳ ಪ್ರಕರಣವನ್ನು ನಿರ್ವಹಿಸುವಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯನ್ನು ಸಂಪರ್ಕಿಸಲು ಯಾವುದೇ ಆತಂಕ ಬೇಡ.

– ಕಲಾ ಕೃಷ್ಣಮೂರ್ತಿ, ಡಿಸಿಪಿ ಈಶಾನ್ಯ ವಿಭಾಗ

ಬೇರೆಡೆಗಿಂತ ಸುರಕ್ಷಿತ ನಗರ

ಬೆಂಗಳೂರು ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲದ ನಗರ ಎನ್ನಲಾಗದು. ಬೇರೆ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಗೆ ಹೋಲಿಸಿದರೆ ಇಲ್ಲಿನ ಸ್ಥಿತಿಗತಿ ಉತ್ತಮವಾಗಿದೆ. ಇಲ್ಲಿ ಜಾಗೃತಿ ಮೂಡಿದೆ. ಹೆಣ್ಣುಮಕ್ಕಳು ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದೆ ಬರುತ್ತಾರೆ. ಜನರ ಮನೋಭಾವ ಬದಲಾಗಬೇಕು.

– ಜಯಮಾಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.