ADVERTISEMENT

ಒಕ್ಕಲಿಗ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಪ್ರಶ್ನಿಸಿ: ಹನುಮಂತರಾಯಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 16:18 IST
Last Updated 9 ನವೆಂಬರ್ 2025, 16:18 IST
ನೇಗಿಲಯೋಗಿ ಸೇವಾ ಟ್ರಸ್ಟ್ ನೂತನ ಕಟ್ಟಡವನ್ನು ಹನುಮಂತರಾಯಪ್ಪ ಉದ್ಘಾಟಿಸಿದರು.
ನೇಗಿಲಯೋಗಿ ಸೇವಾ ಟ್ರಸ್ಟ್ ನೂತನ ಕಟ್ಟಡವನ್ನು ಹನುಮಂತರಾಯಪ್ಪ ಉದ್ಘಾಟಿಸಿದರು.   

ರಾಜರಾಜೇಶ್ವರಿ ನಗರ: ‘ಒಕ್ಕಲಿಗ ಸಮಾಜದ ಕಸ ಸಂಗ್ರಹಿಸುವ ಗುತ್ತಿಗೆದಾರ ದುಡ್ಡು ಕೊಡಲಿಲ್ಲ ಎಂದು ಅವರ ಹೆಂಡತಿ-ಮಕ್ಕಳ ಬಗ್ಗೆ ಹೀನಾಯವಾಗಿ ಶಾಸಕ ಮುನಿರತ್ನ ಮಾತನಾಡಿದ್ದರು. ನಮ್ಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದಾಗ ಸಮಾಜದ ಬಂಧುಗಳು ಪ್ರಶ್ನಿಸಬೇಕು’ ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು.

ಜ್ಞಾನ ಜ್ಯೋತಿನಗರದಲ್ಲಿ ನೇಗಿಲ ಯೋಗಿ ಸೇವಾ ಟ್ರಸ್ಟ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಮಾಜದ ಹೆಣ್ಣು ಮಗಳು ವಿಧಾನಸಭಾ ಚುನಾವಣೆ ವೇಳೆ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿದ್ದಾಗ ಅವರಿಗೆ ಬೆದರಿಕೆ ಹಾಕಿ ಗೂಂಡಾ ಪ್ರವ್ರತ್ತಿ ಪ್ರದರ್ಶಿಸಿದ್ದರಿಂದ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್. ಕುಸುಮಾ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿರುವ ವಿಚಾರವನ್ನು ನಿರ್ಮಲಾನಂದ ಸ್ವಾಮೀಜಿಯವರ ಗಮನಕ್ಕೂ ತಂದಿದ್ದೆ. ಅವರು ಯಾಕೆ ಮೌನ ವಹಿಸಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

‘ನನ್ನ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾನೆ. ಈತನ ವಿಚಾರ ರಾಜ್ಯಕ್ಕೆ ಗೊತ್ತಿದೆ’ ಎಂದು ಏಕವಚನದಲ್ಲಿ ಹೇಳಿದರು.

ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ‘ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಮತ್ತೊಬ್ಬರಿಗೆ ಕೆಡುಕು, ಮೋಸ ಮಾಡಬಾರದು. ತನಗೆ ಸಿಕ್ಕಿರುವ ಅಧಿಕಾರ, ಸಂಪತ್ತು ಸಮಾಜಕ್ಕೆ ನೀಡಬೇಕು. ಮತ್ತೊಬ್ಬರಿಗೆ ಅನ್ಯಾಯ, ದ್ರೋಹ ಬಗೆಯಬಾರದು. ದ್ರೋಹ ಬಗೆಯುವವರ ಬಗ್ಗೆ ಸಮಾಜ ಜಾಗೃತವಾಗಿರಬೇಕು’ ಎಂದು ಸಲಹೆ ನೀಡಿದರು.

ಜವಳಿ ಅಭಿವೃದ್ದಿ ಆಯುಕ್ತೆ ಕೆ.ಜ್ಯೋತಿ, ಸ್ಪಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದ ಸ್ವಾಮೀಜಿ, ಶಾಸಕ ಮುನಿರತ್ನ, ಸಮಾಜ ಸೇವಕ ಎಂ.ಸಿ. ಶಿವಕುಮಾರ್, ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ವೇದಿಕೆಯ ಡಿ.ಮುನಿರಾಜು, ಜಮೀನು ದಾನಿ ಮುನಿರತ್ನಪ್ಪ, ಅಧ್ಯಕ್ಷ ಜಯರಾಮಯ್ಯ ಮಾತನಾಡಿದರು.