ADVERTISEMENT

‘ನಿಮ್ಮ ಆಲೋಚನೆಗಳನ್ನು ಪ್ರಶ್ನಿಸಿಕೊಳ್ಳಿ’

‘ಒತ್ತಡದಿಂದ ಆಂತರಿಕ ವಿಕಸನ ಹೇಗೆ?’ ಸಂವಾದ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 19:53 IST
Last Updated 13 ಅಕ್ಟೋಬರ್ 2019, 19:53 IST
ಸಂವಾದದಲ್ಲಿ ಮಾತನಾಡಿದಡಾ. ಉಷಾ ವಸ್ತಾರೆ– ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಮಾತನಾಡಿದಡಾ. ಉಷಾ ವಸ್ತಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಮುಂದೇನಾಗಿಬಿಡುತ್ತದೆಯೋ? ಅಪಾಯ ಎದುರಾದರೆ ಹೇಗೆ ಎಂಬಂತಹ ಊಹಾತ್ಮಕ ಆಲೋಚನೆಗಳು ಒತ್ತಡವನ್ನು ಹೆಚ್ಚಿಸುತ್ತವೆ. ಇಂತಹ ಆಲೋಚನೆಗಳ ಬಗ್ಗೆ ನಿಮ್ಮನ್ನು ನೀವೇ ಪ್ರಶ್ನಿಸಿ ಕೊಳ್ಳಬೇಕು. ಬಹುತೇಕ ಸಂದರ್ಭಗಳಲ್ಲಿ ಇಂತಹ ಆತಂಕಗಳು ನಿಜ ಆಗಿರುವುದೇ ಇಲ್ಲ’ ಎಂದು ‘ಯೋಗಕ್ಷೇಮ’ ಸಂಸ್ಥಾಪಕಿ, ನರವಿಜ್ಞಾನಿ ಡಾ. ಉಷಾ ಉಸ್ತಾರೆ ಹೇಳಿದರು.

ಯೋಗಕ್ಷೇಮ ಸಂಸ್ಥೆ ನಗರದಲ್ಲಿ ಭಾನುವಾರ ಒತ್ತಡದ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಯಾವುದು ನಿಜ ಮತ್ತು ಯಾವುದು ಕಲ್ಪನೆ ಎನ್ನುವುದು ಮಿದುಳಿಗೆ ಗೊತ್ತಾಗುವುದಿಲ್ಲ. ಇಂತಹ ಆಲೋಚನೆಗಳು ನಿಜವೋ–ಸುಳ್ಳೋ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರೆ ಯಾವುದೇ ಆತಂಕ ಸೃಷ್ಟಿಯಾಗುವುದಿಲ್ಲ’ ಎಂದರು.

‘ಚಿರತೆ ದಾಳಿ ಸಂದರ್ಭದಲ್ಲಿ ಜಿಂಕೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ. ಇಂತಹ ಒತ್ತಡ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗೆ ಶಕ್ತಿ ನೀಡುತ್ತದೆ. ಈ ರೀತಿ ಒತ್ತಡವು ಆಂತರಿಕ ವಿಕಸನಕ್ಕೂ ದಾರಿ ಮಾಡಿಕೊಡುತ್ತದೆ’ ಎಂದು ಹೇಳಿದರು.ಪರಸ್ಪರ ಸಂಬಂಧ ಮುಖ್ಯ: ‘ದೈಹಿಕ ಆರೋಗ್ಯ ಅಥವಾ ಹಣಕಾಸು ಸ್ಥಿತಿಗತಿಗಿಂತ ಪರಸ್ಪರ ಸಂಬಂಧ ಮುಖ್ಯವಾದುದು. ಪರಸ್ಪರರ ನಡುವಿನ ಸಂಬಂಧ ಹದಗೆಟ್ಟರೆ ಅದು ಅನಾರೋಗ್ಯಕ್ಕಿಂತಲೂ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತದೆ’ ಎಂದು ಹೇಳಿದರು.

ADVERTISEMENT

ದೈಹಿಕ ಚಟುವಟಿಕೆ: ‘ಒತ್ತಡದ ಜೀವನಕ್ಕೆ ಸೂಕ್ತ ಪರಿಹಾರ ದೈಹಿಕವಾಗಿ ಸದಾ ಚಟುವಟಿಕೆಯಿಂದಿರುವುದು. ಸದಾ ಕುಳಿತಿರುವುದು ಧೂಮಪಾನಕ್ಕಿಂತ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ’ ಎಂದು ಉಷಾ ಹೇಳಿದರು.

ಒತ್ತಡ ವರ್ಗಾವಣೆ

‘ಗಂಡನಾದವನು ಯಾವುದೋ ಒತ್ತಡದಿಂದ ಪತ್ನಿಯ ಮೇಲೆ ರೇಗಿದರೆ, ಅವಳು ಒತ್ತಡಕ್ಕೆ ಒಳಗಾಗುತ್ತಾಳೆ. ಪತ್ನಿ ಆ ಕೋಪವನ್ನು ಮಕ್ಕಳ ಮೇಲೆ ತೋರಿಸಿದಾಗ ಒತ್ತಡ ವರ್ಗಾವಣೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ವಾತಾವರಣವೇ ಹಾಳಾಗುತ್ತದೆ’ ಎಂದು ಉಷಾ ಹೇಳಿದರು.

‘ಜೀವನದ ಏರಿಳಿತಗಳಿಗೆ ಮೌನವಾಗಿರುವುದೇ ನಿಜವಾದ ಪರಿಹಾರ. ಯಾವುದೇ ಕಠಿಣ ಪರಿಸ್ಥಿತಿ ಹೆಚ್ಚು ದಿನ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಕಾರಾತ್ಮಕವಾಗಿ ಯೋಚಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.