ADVERTISEMENT

‘ಚಿಂದಿ ಆಯುವವರಿಗೂ ಬದುಕುವ ಹಕ್ಕಿದೆ’

ಪರಿಸರ ಹಬ್ಬ ಕಾರ್ಯಕ್ರಮದಲ್ಲಿ ಸಮಸ್ಯೆಯ ವಿರಾಟ ದರ್ಶನ ಮಾಡಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 10:44 IST
Last Updated 29 ಜೂನ್ 2018, 10:44 IST
ನಗರದಲ್ಲಿ ಶುಕ್ರವಾರ, ಹಸಿರು ದಳ ಆಯೋಜಿಸಿದ್ದ ವಿಶ್ವ ಪರಿಸರದ ದಿನದ ಅಂಗವಾಗಿ ಹಸಿರು ಹಬ್ಬ ಮತ್ತು ವ್ಯಾಲ್ಯೂಯಿಂಗ್ ಅರ್ಬನ್‌ ವೇಸ್ಟ್‌ ಕಾರ್ಯಕ್ರಮವನ್ನು ಶಾಸಕಿ ಸೌಮ್ಯಾರೆಡ್ಡಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಹಸಿರು ದಳದ ನಳಿನಿ ಶೇಖರ್‌, ನಟ ಸುರೇಶ್‌ ಹೆಬ್ಳೀಕರ್, ಪರಿಸರವಾದಿ ಯಲ್ಲಪ್ಪ ರೆಡ್ಡಿ ಇದ್ದಾರೆ -ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ, ಹಸಿರು ದಳ ಆಯೋಜಿಸಿದ್ದ ವಿಶ್ವ ಪರಿಸರದ ದಿನದ ಅಂಗವಾಗಿ ಹಸಿರು ಹಬ್ಬ ಮತ್ತು ವ್ಯಾಲ್ಯೂಯಿಂಗ್ ಅರ್ಬನ್‌ ವೇಸ್ಟ್‌ ಕಾರ್ಯಕ್ರಮವನ್ನು ಶಾಸಕಿ ಸೌಮ್ಯಾರೆಡ್ಡಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಹಸಿರು ದಳದ ನಳಿನಿ ಶೇಖರ್‌, ನಟ ಸುರೇಶ್‌ ಹೆಬ್ಳೀಕರ್, ಪರಿಸರವಾದಿ ಯಲ್ಲಪ್ಪ ರೆಡ್ಡಿ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾವು ಚಿಂದಿ ಆಯುವವರು, ಆದರೆ ನಮಗೂ ಬದುಕುವ ಹಕ್ಕು ಇದೆ. ದಿನಕ್ಕೆ ₹300 ಸಂಪಾದನೆ ಮಾಡುತ್ತೇವೆ. ಆದರೂ ಸಮಾಜದಲ್ಲಿ ಗೌರವ ಇಲ್ಲ’ ಹೀಗೆ ತಮ್ಮ ಮನದಾಳ ತೋಡಿಕೊಂಡಿದ್ದು ಕಾಮಾಕ್ಷಿ ಪಾಳ್ಯದ ಅಣ್ಣಮ್ಮ

ವಿಶ್ವ ಪರಿಸರ ದಿನದ ಅಂಗವಾಗಿ ಸ್ವತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ‘ಹಸಿರು ಹಬ್ಬ’ ಮತ್ತು ‘ವ್ಯಾಲ್ಯೂಯಿಂಗ್‌ ಅರ್ಬನ್‌ ವೇಸ್ಟ್‌’ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು. ‘ನಾವು ಹೆಣ್ಣು ಮಕ್ಕಳು ನಮ್ಮ ಆರೋಗ್ಯ, ಸೌಂದರ್ಯದ ಕಾಳಜಿ ಮಾಡುತ್ತಿಲ್ಲ. ಮಕ್ಕಳ ಕಡೆಗೂ ಗಮನ ನೀಡುತ್ತಿಲ್ಲ. ನಮ್ಮ ಬದುಕು ಚಿಂದಿ ಆಯುವುದರಲ್ಲೇ ಕಳೆದು ಹೋಗಿದೆ. ನಾವು ಎರಡು ದಿನ ಕೆಲಸ ಮಾಡದಿದ್ದರೆ ಆಗುತ್ತಾ. ನಮಗೂ ಸ್ವಚ್ಛವಾಗಿ ಕಾಣುವ ಕನಸು ಇಲ್ಲವೇ’ ಎಂದು ಪ್ರಶ್ನಿಸಿದರು.

‘ನನ್ನ ಮಗಳು ಆರ್‌.ಸಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಇನ್ನಿಬ್ಬರು ಹೆಣ್ಣುಮಕ್ಕಳಿಗೆ ವಿದ್ಯೆ ಹತ್ತಲಿಲ್ಲ ಎಂಬ ಕಾರಣ ಹೇಳಿ ಶಾಲೆ ಬಿಡಿಸಿಬಿಟ್ಟೆ. ಗಂಡ ಕೂಡ ಚಿಂದಿ ಆಯುತ್ತಾನೆ. ದಿನಕ್ಕೆ ₹500ರಿಂದ 600 ದುಡಿಯುತ್ತಿದ್ದೇವೆ. ಕೊಳಗೇರಿ ಆದರೂ ಸ್ವಂತ ಮನೆ ಇದೆ. ಆದರೂ ನೆಮ್ಮದಿ ಇಲ್ಲ. ಗೌರವ ಇಲ್ಲ. ಕಸದ ಜೊತೆಗೆ ಆರೋಗ್ಯ ಕೂಡ ಇಲ್ಲ’ ಎಂದರು.

ADVERTISEMENT

‘ಹಸಿರು ದಳದವರ ಸಹಾಯದಿಂದ ಎಲ್ಲರಿಗೂ ಹಸಿರು ಕಾರ್ಡ್‌ ಕೊಟ್ಟಿದಾರೆ. ಇದರಿಂದ ಸ್ಕಾಲರ್‌ಶಿಪ್‌ ಸಿಕ್ಕಿದೆ. ಓದುವುದಕ್ಕೆ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕಸದಿಂದ ಆಧುನಿಕ ಪರಿಕರಗಳನ್ನು ತಯಾರಿಸಲು ನಮಗೆ ತರಬೇತಿ ನೀಡಿದ್ದಾರೆ. ಆದರೆ ನಮಗೆ ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಮನೆ, ಗ್ರಂಥಾಲಯದಲ್ಲಿ ನೀರಿನ ಸೌಲಭ್ಯ ಇಲ್ಲ’ ಎಂದು ಕಾಗದ ಆಯುವವರ ಸಮುದಾಯದ ಬಾಲಕಿ, ಮೇರಿ ತಮ್ಮ ಧ್ವನಿಗೂಡಿಸಿದರು.

ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ, ‘ಐದು ವರ್ಷದಿಂದ ನಾನು ಚಿಂದಿ ಆಯುವವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಅವರಿಗೆ ಏನಾದರೂ ಸಹಾಯ ಮಾಡಬೇಕು ನಾನು ಸದಾ ಮುಂದೆ ಇರುತ್ತೇನೆ. ಆದರೆ ಈಗ ಶಾಸಕಿಯಾಗಿ ನಾನು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸುಲಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.