ಬೆಂಗಳೂರು: ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನವು ಇದೇ 12ರಿಂದ 16ರವರೆಗೆ ಬನಶಂಕರಿ ಎರಡನೇ ಹಂತದ ದೇವಗಿರಿಯ ವರಪ್ರದ ವೆಂಕಟೇಶ್ವರ ದೇವಸ್ಥಾನದ ವೆಂಕೋಬಾಚಾರ್ಯ ಸ್ಮೃತಿ ಮಂಟಪದಲ್ಲಿ ರಜತ ಮಹೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.
ಬುಧವಾರ ಸಂಜೆ 4.30ಕ್ಕೆ ಪುರಂದರದಾಸರ ಆರಾಧನಾ ಮಹೋತ್ಸವ ಹಮ್ಮಿಕೊಂಡಿದ್ದು, ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಹಾಗೂ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗಾಯಕ ಆರ್.ಕೆ. ಪದ್ಮನಾಭ ಅವರ ಶಿಷ್ಯವೃಂದದಿಂದ ‘ಪುರಂದರ ನಮನ’ ಕರ್ನಾಟಕ ಶಾಸ್ತ್ರೀಯ ಸಂಗೀತ ಗೋಷ್ಠಿ ನಡೆಯಲಿದೆ.
ಸಂಜೆ 6ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆರ್.ಕೆ. ಪದ್ಮನಾಭ ಅವರಿಗೆ ‘ಜೀವಮಾನ ಸಂಗೀತ ಸಾಧನಾ ಪ್ರಶಸ್ತಿ’ ಹಾಗೂ ‘ರಾಘವೇಂದ್ರ ಭಕ್ತಿ ಸಂಗೀತ ವಿಶಾರದ ಬಿರುದು’ ಪ್ರದಾನ ಮಾಡಲಾಗುತ್ತದೆ. ವೇದಾಂತ ಪಂಡಿತ ದಿವಂಗತ ಪಿ. ಅನಂತ ಪದ್ಮನಾಭಾಚಾರ್ಯ ಅವರನ್ನು ‘ವ್ಯಾಸ ಪ್ರಶಸ್ತಿ’ಗೆ ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ. ಇದೇ ಪ್ರಶಸ್ತಿಗೆ ನಿವೃತ್ತ ವೇದಾಂತ ಪ್ರಾಧ್ಯಾಪಕ ಜಿ. ಶಿವರಾಂ ಅಗ್ನಿಹೋತ್ರಿ ಭಾಜನರಾಗಿದ್ದಾರೆ. ‘ಗುರುರಾಘವೇಂದ್ರ ಸಂಸ್ಮರಣ ಪ್ರಶಸ್ತಿ’ಗೆ ಹಿಂದೂಸ್ತಾನಿ ಸಂಗೀತ ಕಲಾವಿದೆ ಅರ್ಚನಾ ಕುಲಕರ್ಣಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಗೌರಿ ನಾಗರಾಜ್ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಇಲ್ಲಿನ ವೇದ ವಿ. ಎಸ್. ಹಾಗೂ ‘ಧ್ರುವ ಪ್ರಶಸ್ತಿ’ಗೆ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದ ದೇವರಾತ ಜೋಶಿ ಭಾಜನರಾಗಿದ್ದಾರೆ. ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ವಿದ್ವಾಂಸ ಎಸ್. ರಂಗನಾಥ್ ಹಾಗೂ ಸಂಗೀತ ನಿರ್ದೇಶಕ ರಾಯಚೂರು ಶೇಷಗಿರಿದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದಿದ್ದಾರೆ.
ಗುರುವಾರದಂದು ಹರಿದಾಸ ಕೃತಿಗಳ ಗಾನ ಸಂಭ್ರಮ ಹಾಗೂ ಪುರಂದರ ವೈಭವ ನೃತ್ಯ ರೂಪಕ ಪ್ರದರ್ಶನ, ಶುಕ್ರವಾರದಂದು ಕನಕದಾಸರ ಆರಾಧನಾ ಮಹೋತ್ಸವ ಹಾಗೂ ಕನಕ ವೈಭವಂ ನೃತ್ಯರೂಪಕ, ಶನಿವಾರದಂದು ತ್ಯಾಗರಾಜರ ಆರಾಧನಾ ಮಹೋತ್ಸವ ಹಾಗೂ ತ್ಯಾಗರಾಜರು ವಿರಚಿತ ಪಂಚರತ್ನ ಕೃತಿಗಳ ನೃತ್ಯವೈಭವ, ಭಾನುವಾರದಂದು ಬಿ.ಎಸ್. ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬೆಳಗೆರೆ ಲಕ್ಷ್ಮೀ ರಂಗನಾಥ ಸ್ವಾಮಿಯ ನೃತ್ಯ ರೂಪಕ (ದಶಾವತಾರ) ಪ್ರದರ್ಶನ ಕಾಣಲಿದೆ. ಕಲಾವಿದೆ ಕಮಲಾ ಶ್ರೀನಿವಾಸ ಅವರು ‘ಬಿ.ಎಸ್. ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 13ರಿಂದ 16ರವರೆಗೆ ಪ್ರತಿನಿತ್ಯ ಸಂಜೆ 5 ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.