ADVERTISEMENT

ಪೊಲೀಸರಿಗೆ ವಿವರಣೆ ಕೊಟ್ಟ ಶಾಸಕ ರಘು ಆಚಾರ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:35 IST
Last Updated 22 ನವೆಂಬರ್ 2018, 19:35 IST
ರಘು ಆಚಾರ್
ರಘು ಆಚಾರ್   

ಬೆಂಗಳೂರು: ಬಿಬಿಎಂಪಿ ಚುನಾವಣೆ ವೇಳೆ ತಪ್ಪು ವಿಳಾಸ ನೀಡಿ ಮತದಾನದ ಹಕ್ಕನ್ನು ಬದಲಿಸಿಕೊಂಡ ಹಾಗೂ ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದು ಸರ್ಕಾರಕ್ಕೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ರಘು ಆಚಾರ್ ಹಾಗೂ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್ ಗುರುವಾರ ವಿಧಾನಸೌಧ ಠಾಣೆಗೆ ತೆರಳಿ ವಿವರಣೆ ನೀಡಿದರು.

‘ನಾವು ಯಾವುದೇ ತಪ್ಪು ಮಾಡಿಲ್ಲ. ಸಭಾಪತಿಗಳು ಈ ಹಿಂದೆಯೇ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. ಆದರೂ, ಈಗ ಯಾವ ಕಾರಣಕ್ಕೆ ಎಫ್‌ಐಆರ್ ದಾಖಲಿಸಿದ್ದೀರಾ’ ಎಂದು ಪ್ರಶ್ನಿಸಿದರು. ಅದಕ್ಕೆ ಪೊಲೀಸರು, ‘ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕರೆದಾಗ ವಿಚಾರಣೆಗೆ ಬರಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಘು ಆಚಾರ್, ‘ನನ್ನ ವಿರುದ್ಧ ಜನರಿಗೆ ತಪ್ಪು ಭಾವನೆ ಹೋಗಬಾರದು ಎಂಬ ಕಾರಣಕ್ಕೆ, ಪೊಲೀಸರು ನೋಟಿಸ್ ಕೊಡುವ ಮುಂಚೆಯೇ ಠಾಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಸತ್ಯಾಂಶವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದರು.

ADVERTISEMENT

‘ನಾನು ಬೆಳ್ಳಂದೂರು ನಿವಾಸಿ ಎಂಬುದಕ್ಕೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಹಲವು ದಾಖಲೆಗಳಿವೆ. ಜನನ ಪ್ರಮಾಣ ಪತ್ರದಲ್ಲಿ ವಿಳಾಸ ಮೈಸೂರು ಆಗಿದೆ. ನನ್ನ ಮತಕ್ಷೇತ್ರ ಚಿತ್ರದುರ್ಗ ಆಗಿರುವುದರಿಂದ, ನಿಯಮದ ಪ್ರಕಾರವೇ ಭತ್ಯೆ ಪಡೆದುಕೊಂಡಿದ್ದೇನೆ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.