
ಬೊಮ್ಮನಹಳ್ಳಿ: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ 10 ಮುದ್ದೆ, ತಮ್ಮ 12 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಾಟಿ ಕೋಳಿ ಸಾರು, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ನಡೆಯಿತು.
ವೈಟ್‌ಫೀಲ್ಡ್‌ನ ಅಜಯಕುಮಾರ್ 12 ಮುದ್ದೆ ಉಣ್ಣುವ ಮೂಲಕ ಪ್ರಥಮ ಬಹುಮಾನವಾಗಿ ಬಂದ ಟಗರನ್ನು ಪಡೆದರು. ಇವರ ಸಹೋದರಿ ಸೌಮ್ಯಾ ಮಹಿಳೆಯರ ವಿಭಾಗದಲ್ಲಿ 10 ಮುದ್ದೆ ತಿಂದು ಸೀರೆ, ಟಿ.ವಿ ಮತ್ತು ₹5000 ನಗದು ಬಹುಮಾನ ಪಡೆದರು.
ಅತ್ತಿಬೆಲೆಯ ರಮೇಶ್ 9 ಮುದ್ದೆ ತಿಂದು ಎರಡನೇ ಸ್ಥಾನದೊಂದಿಗೆ ಕುರಿಯನ್ನು ಬಹುಮಾನವಾಗಿ ಪಡೆದರು. ಕೋಲಾರದ ಯಶವಂತಕುಮಾರ್ 8½ ಮುದ್ದೆ ಉಂಡು ತೃತೀಯ ಸ್ಥಾನ ಗಳಿಸಿ, ನಾಲ್ಕು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿಯ ಚಂದ್ರಕಲಾ 9 ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದು ಮಿಕ್ಸರ್ ಗ್ರೈಂಡರ್, ₹4 ಸಾವಿರ ನಗದು ಮತ್ತು ಸೀರೆಯನ್ನು ಬಹುಮಾನವಾಗಿ ಪಡೆದರು. ಯಲಹಂಕದ ಪುಷ್ಪ 8 ½ ಮುದ್ದೆ ಉಂಡು ತೃತೀಯ ಸ್ಥಾನದೊಂದಿಗೆ ಕಿಚನ್ ಸೆಟ್, ₹3 ಸಾವಿರ ನಗದು ಮತ್ತು ಸೀರೆಯನ್ನು ಪಡೆದರು.
16 ಜನ ಮಹಿಳೆಯರೂ ಸೇರಿದಂತೆ ಒಟ್ಟು 68 ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 45 ನಿಮಿಷದ ಅವಧಿ ನೀಡಲಾಗಿತ್ತು. ಮುದ್ದೆಯ ಜೊತೆಗೆ ನಾಟಿ ಕೋಳಿ ಫ್ರೈ, ಕಬಾಬ್, ಮೊಟ್ಟೆ, ಸಲಾಡ್ ನೀಡಲಾಗಿತ್ತು. ವಕೀಲ ಅನಿಲ್ ರೆಡ್ಡಿ ಕಾರ್ಯಕ್ರಮ ಆಯೋಜಿಸಿದ್ದರು.
ಪ್ರಥಮ ಸ್ಥಾನ ಗಳಿಸಿದ ಸೌಮ್ಯ ಮಾತನಾಡಿ, ‘ಕಳೆದ ವರ್ಷದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ್ದೆ, ಈಗಲೂ ಪ್ರಥಮ ಸ್ಥಾನ ಗಳಿಸಿದ್ದೇನೆ. ಜೊತೆಗೆ ತಮ್ಮನನ್ನು ಸ್ಪರ್ಧೆಗೆ ಕರೆತಂದಿದ್ದೆ. ಅವನೂ ಪ್ರಥಮ ಸ್ಥಾನ ಗಳಿಸಿರುವುದು ಖುಷಿ ತಂದಿದೆ’ ಎಂದರು.
ವಕೀಲ ನಾರಾಯಣಸ್ವಾಮಿ, ಸ್ಥಳೀಯ ಕಾಂಗ್ರೆಸ್ ಮುಖಂಡ ಕೂಡ್ಲುಗೇಟ್ ರವೀಂದ್ರ, ಕೆಪಿಸಿಸಿ ಸದಸ್ಯ ಸಯ್ಯದ್ ಸರ್ದಾರ್, ಲೋಕಾಯುಕ್ತ ಡಿವೈಎಸ್ಪಿ ಎಲ್.ವೈ.ರಾಜೇಶ್ ಭಾಗವಹಿಸಿದ್ದರು.
‘ರಾಗಿ ಮಹತ್ವ ಸಾರುವ ಪ್ರಯತ್ನ’
ಬಹುಮಾನ ವಿತರಿಸಿದ ಲೇಖಕ ಶೂದ್ರ ಶ್ರೀನಿವಾಸ್ ʼಜನಪದ ಸಂಸ್ಕೃತಿ ಮತ್ತು ಸಾಮಾಜಿಕ ಚಿಂತನೆಯಿಂದ ರಾಗಿ ಬೆಳೆದು ಬಂದಿದೆ. ಯುವ ಜನಾಂಗ ಪಾಶ್ಚಾತ್ಯ ತಿನಿಸುಗಳಿಗೆ ಮನಸೋತು ಆರೋಗ್ಯಕರವಾದ ದೇಸಿ ಆಹಾರವನ್ನು ತ್ಯಜಿಸುತ್ತಿರುವುದು ಕಳವಳಕಾರಿ. ಇಂತಹ ಸ್ಪರ್ಧೆಗಳ ಮೂಲಕ ರಾಗಿಯ ಮಹತ್ವವನ್ನು ಸಾರುವ ಕಾರ್ಯ ಶ್ಲಾಘನೀಯʼ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.