ADVERTISEMENT

ಪಬ್, ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ದಾಳಿ| 38 ಯುವತಿಯರ ರಕ್ಷಣೆ, ₹1.06 ಲಕ್ಷ ವಶ

ಪರವಾನಗಿ ಪಡೆಯದೆ ಡಿ.ಜೆ ಬಳಸುತ್ತಿದ್ದವರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:33 IST
Last Updated 22 ಜೂನ್ 2019, 19:33 IST

ಬೆಂಗಳೂರು: ನೂತನ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಶುಕ್ರವಾರ ಮಧ್ಯರಾತ್ರಿ ನಗರ ಸುತ್ತಾಡಿದ್ದಾರೆ (ನೈಟ್ ರೌಂಡ್ಸ್). ಆ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು, ಪಬ್‌, ಡ್ಯಾನ್ಸ್‌ ಬಾರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಪಬ್ ಮತ್ತು ಬಾರ್‌ಗಳಿಂದ ಶಬ್ದ ಮಾಲಿನ್ಯ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ಕಾರ್ಯವೈಖರಿ‌ ಬಗ್ಗೆ ಇತ್ತೀಚೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಶಬ್ಧ ಮಾಲಿನ್ಯ ಮಾಪನದ ವಿಧಾನವೇ ಸರಿ ಇಲ್ಲ ಎಂದೂ ಹೈಕೋರ್ಟ್ ಕಿಡಿಕಾರಿತ್ತು. ಹೀಗಾಗಿ ಶುಕ್ರವಾರ ತಡರಾತ್ರಿ ಅಲೋಕ್ ಕುಮಾರ್, ಚರ್ಚ್ ಸ್ಟ್ರೀಟ್‌ಗೆ ದಿಢೀರ್ ಭೇಟಿ ಕೊಟ್ಟು, ಪಬ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಪರವಾನಗಿ ಪಡೆಯದೆ ಡಿ.ಜೆ ಬಳಸುತ್ತಿದ್ದ ಪಬ್‍ಗಳಿಗೆ ನೋಟಿಸ್ ನೀಡಿದ್ದಾರೆ. ಜೂನ್ 26ರ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಿದೆ. ಹೀಗಾಗಿ, ಪಬ್‍ಗಳಲ್ಲಿ ನಡೆಯುತ್ತಿರುವ ಚಟುವಟಿಕೆ ಕಾನೂನು ವ್ಯಾಪ್ತಿಯಲ್ಲಿದೆಯೇ ಎಂದು ಪರಿಶೀಲಿಸಿದ್ದಾರೆ.

ADVERTISEMENT

ಈ ನಡುವೆ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸಿದ್ದಾರೆ. ಮೆಜೆಸ್ಟಿಕ್‍ನ ಸಿಟಿ ಸೆಂಟರ್‌ ಕಟ್ಟಡದ ನೆಲ ಮಹಡಿಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಡ್ಯಾನ್ಸ್‌ ಬಾರ್‌ ಮೇಲೆ ದಾಳಿ ನಡೆಸಿದ ಪೊಲೀಸರು, 25 ಮಂದಿಯನ್ನು ವಶಕ್ಕೆ ಪಡೆದು, ₹ 1.06 ಲಕ್ಷ ಜಪ್ತಿ ಮಾಡಿದ್ದಾರೆ. ಬಾರ್‌ನಲ್ಲಿದ್ದ 38 ಯುವತಿಯರನ್ನು ರಕ್ಷಿಸಲಾಗಿದೆ.

‘ದಾಳಿ ವೇಳೆ ಬಾರ್‌ನಲ್ಲಿ ಕೆಲವರು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅಲ್ಲದೆ, ಅಲ್ಲಿದ್ದ ಯುವತಿಯರಿಗೆ ಯಾವುದೇ ವಸ್ತ್ರ ಸಂಹಿತೆಇರಲಿಲ್ಲ. ಈ ಬಗ್ಗೆ ಬಂದ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಡ್ಯಾನ್ಸ್‌ ಬಾರ್‌ ಹೆಸರಿನಲ್ಲಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸಿಕೊಂಡು ಲೈಂಗಿಕ ಚಟುವಟಿಕೆಗೆ ಪ್ರಚೋದಿಸಿ ಹಣ ಸಂಪಾದಿಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಾರ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ (ವ್ಯವಸ್ಥಾಪಕ ಹಾಗೂ ಕ್ಯಾಷಿಯರ್‌) ಭಾಸ್ಕರ್‌ ಮತ್ತು ಶಂಕರ್‌ ಎಂಬುವವರನ್ನು ಬಂಧಿಸಲಾಗಿದೆ. ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಡ್ಯಾನ್ಸ್ ಬಾರ್‌ನಲ್ಲಿ ರೌಡಿ ಕುಣಿಗಲ್ ಗಿರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಗಿರಿ ಅಲ್ಲಿಂದ ಪರಾರಿಯಾಗಿದ್ದ.

ಬೆಂಗಳೂರು: ಶುಕ್ರವಾರ ರಾತ್ರಿ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಹ್ಯಾಶ್ ಬಿಯರ್ ಪಬ್‍ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಬ್ರ್ಯಾಂಡಿಂಗ್‌ ವಿಭಾಗದ ವ್ಯವಸ್ಥಾಪಕ ಮತ್ತು ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಪಬ್‌ ವ್ಯವಸ್ಥಾಪಕ ಅಭಿಷೇಕ್‌ ಕುಲಕರ್ಣಿ ಎಂಬುವವರನ್ನು ಕಬ್ಬನ್‍ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಸಂಜಯ ನಗರದ ಆರ್‌ಎಂವಿ ಎರಡನೇ ಹಂತದ ನಿವಾಸಿ ಪವನ್ ಅಟ್ಟಾವರ (36) ಮತ್ತು ಆರ್.ಟಿ. ನಗರದ ಗಂಗಾನಗರ ನಿವಾಸಿ ವೇದಾ ಯಾದವ್‌ (31) ಮೃತಪಟ್ಟವರು. ಪಬ್‌ನಿಂದ ಹೊರಬರುತ್ತಿದ್ದಂತೆ ಇಬ್ಬರೂ ಆಯತಪ್ಪಿ ಬೀಳುವ ದೃಶ್ಯ ಪಬ್‌ನಲ್ಲಿ ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ, ನಿರ್ಲಕ್ಷ್ಯದ ಆರೋಪದಡಿ ಪಬ್‍ ಮಾಲೀಕ ಚಂದನ್ ಮತ್ತು ಕಟ್ಟಡ ಮಾಲೀಕ ಸುಧೀರ್ ಶೆಟ್ಟಿ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಿವಾಹಿತರಾಗಿದ್ದ ಪವನ್‌‌, ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಯಿಂದ ದೂರವಾಗಿದ್ದ ವೇದಾ, ತಮ್ಮ ಐದು ವರ್ಷದ ಮಗಳ ಜತೆ ವಾಸವಾಗಿದ್ದರು. ಕೆಲವು ತಿಂಗಳಿಂದ ಇಬ್ಬರ ನಡುವೆ ಪರಿಚಯವಾಗಿದೆ. ರಾತ್ರಿ 8.30ರ ಸುಮಾರಿಗೆ ಸ್ನೇಹಿತ ದೀಪಕ್‌ ರಾವ್‌ ಜೊತೆ ಪಬ್‍ಗೆ ಬಂದಿದ್ದ ಇಬ್ಬರೂ ಮದ್ಯಪಾನ ಮಾಡಿದ್ದಾರೆ. ಮದ್ಯಸೇವಿಸಿದ ಬಳಿಕ 11.30ರ ಸುಮಾರಿಗೆ ಮೂವರೂ ಪಬ್‌ನಿಂದ ಹೊರಬರುತ್ತಿದ್ದಂತೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ಈ ವೇಳೆ, ದೀಪಕ್ ರಾವ್, ‘ಪಬ್‍ನ ಬಿಲ್ ಪಾವತಿಸಿದ ನಂತರ ಲಿಫ್ಟ್‌ನಲ್ಲಿ ಹೋಗೋಣ’ ಎಂದು ಪವನ್ ಮತ್ತು ವೇದಾಗೆ ಹೇಳಿದ್ದಾರೆ. ಆದರೆ, ಅವರ ಮಾತು ನಿರ್ಲಕ್ಷ್ಯಿಸಿ ಇಬ್ಬರೂ ಸ್ವಲ್ಪ ಕೆಲಸ ಇದೆ ಎಂದು ಪರಸ್ಪರ ಕೈ ಹಿಡಿದು ಮೆಟ್ಟಿಲುಗಳ ಕೆಳಗಿಳಿದಿದ್ದಾರೆ. ನಾಲ್ಕು ಮೆಟ್ಟಿಲು ಇಳಿಯುತ್ತಿದ್ದಂತೆ ಆಯತಪ್ಪಿ ವೇದಾ ಏಕಾಏಕಿ ಪವನ್ ಮೇಲೆ ಒರಗಿದ್ದು, ಪವನ್ ಕೂಡ ನಿಯಂತ್ರಣ ಕಳೆದುಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಮಹಡಿಯ ಮೆಟ್ಟಿಲುಗಳ ಮಧ್ಯೆ ಇರುವ ವೆಂಟಿಲೇಶನ್ ಕಿಟಕಿ ಮೇಲೆ ಬಿದ್ದಿದ್ದಾರೆ. ಕಿಟಕಿಗೆ ಗ್ರೀಲ್ ಅಥವಾ ಯಾವುದೇ ಗಟ್ಟಿಯಾದ ವಸ್ತು ಹಾಕಿಲ್ಲದ ಕಾರಣ ಇಬ್ಬರೂ ಕೆಳಗೆ ಇದ್ದ ಸಿಮೆಂಟ್‍ ಕಟ್ಟೆಯ ಮೇಲೆ ಬಿದ್ದು ಬಳಿಕ ರಸ್ತೆಗೆ ಉರುಳಿದ್ದಾರೆ. ಇಬ್ಬರ ತಲೆಗೂ ಗಂಭೀರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ವೇದಾ ಕೊನೆಯುಸಿರೆಳೆದಿದ್ದಾರೆ. ಪವನ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ಹೇಳಿದರು.

ಪೊಲೀಸ್‌ ಕಮೀಷನರ್‌ ಅಲೋಕ್ ಕುಮಾರ್ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲೇಈ ಘಟನೆ ನಡೆದಿದೆ. ರಾತ್ರಿ 11.30ಕ್ಕೆಅಲೋಕ್ ಕುಮಾರ್ ಪಬ್ ಮುಂದೆ ಬಂದು ವಾಹನದಿಂದ ಇಳಿಯುತ್ತಿದ್ದಂತೆ, ಕಿರಿಯ ಅಧಿಕಾರಿಗಳು ಅವರಿಗೆ ಸೆಲ್ಯೂಟ್ ಹಾಕುತ್ತಿದ್ದರು. ಅದೇ ವೇಳೆ ಪವನ್ ಮತ್ತು ವೇದಾ ಕೆಳಗೆ ಬಿದ್ದಿದ್ದಾರೆ. ಜೋರಾಗಿ ಶಬ್ದ ಕೇಳಿದ್ದರಿಂದ ಸ್ಥಳಕ್ಕೆ ತೆರಳಿದ ಅಲೋಕ್ ಕುಮಾರ್ ಮತ್ತು ಸಿಬ್ಬಂದಿ ಇಬ್ಬರನ್ನೂ ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.