ADVERTISEMENT

‘ಪರಿವರ್ತಿತ ರೈಲು’ಗಳಲ್ಲಿ ಕೋಲಾರದಿಂದ ಹೌರಾಕ್ಕೆ ಟೊಮೆಟೊ

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ರೈಲ್ವೆ ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 16:48 IST
Last Updated 5 ಡಿಸೆಂಬರ್ 2020, 16:48 IST

ಬೆಂಗಳೂರು: ಸಾಮಾನ್ಯ ಪ್ರಯಾಣಿಕರ ‘ಪರಿವರ್ತಿತ ರೈಲು’ಗಳಲ್ಲಿ ಕೋಲಾರದಿಂದ ಹೌರಾಕ್ಕೆ ಟೊಮೆಟೊ ಸಾಗಣೆಗೆ ಬೆಂಗಳೂರು ವಿಭಾಗೀಯ ರೈಲ್ವೆ ಮುಂದಾಗಿದೆ. ಒಂದು ವಾರದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎರಡನೇ ದರ್ಜೆಯ ಬೋಗಿಗಳ (ಜಿ.ಎಸ್ ಕೋಚ್) ರೈಲುಗಳನ್ನು ಪರಿವರ್ತನೆ ಮಾಡಿ, ಟೊಮೆಟೊ ಸಾಗಣೆಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಕನಿಷ್ಠ ಹತ್ತು ಬೋಗಿಗಳನ್ನು ಬಳಸಲು ರೈಲ್ವೆ ಮಂಡಳಿ ಅವಕಾಶ ನೀಡಿದ್ದು, ಒಂದು ಶೈತ್ಯಾಗಾರವನ್ನೂ ಒಳಗೊಂಡ 15 ಬೋಗಿಗಳನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಪರಿಚಯಿಸಲು ನಿರ್ಧರಿಸಲಾಗಿದೆ. ಮುಂದಿನ ವಾರದಲ್ಲಿ ಟೊಮೆಟೊ ಸಾಗಿಸುವ ಕಾರ್ಯ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಶನಿವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ಗುಂತಕಲ್‌ಗೆ ಕಿಸಾನ್ ಎಕ್ಸ್‌ಪ್ರೆಸ್‌ ರೈಲು ಸೇವೆ ಇದೆ. ಕೋಲಾರದಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಇದನ್ನು ಸಾಗಿಸಲು ಪರಿವರ್ತಿತ ರೈಲುಗಳನ್ನು ಬಳಸಲಾಗುವುದು. ಈ ಸಂಬಂಧ ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯೊಂದಿಗೆ (ಎಪಿಎಂಸಿ) ಚರ್ಚಿಸಲಾಗುತ್ತಿದೆ. ಒಂದು ರೈಲಿನಲ್ಲಿ ಒಂದು ಬಾರಿಗೆ 15 ಬೋಗಿಗಳಲ್ಲಿ ಹತ್ತು ಟನ್ ಸಾಗಿಸಬಹುದಾಗಿದ್ದು, ಒಟ್ಟಾರೆ ನೂರು ಟನ್‌ಗಳಷ್ಟು ಟೊಮೆಟೊ ಸಾಗಿಸುವ ಗುರಿ ಇದೆ’ ಎಂದರು.

ADVERTISEMENT

‘ಕೋವಿಡ್ ಆರೈಕೆ ಕೇಂದ್ರಗಳಾಗಿ ರೂಪಿಸಲಾದ ಸುಮಾರು 320 ರೈಲು ಬೋಗಿಗಳನ್ನು ಮುಂದಿನ ದಿನಗಳಲ್ಲಿ ಮರುವಿನ್ಯಾಸಗೊಳಿಸಿ, ತರಕಾರಿ ಸೇರಿದಂತೆ ತ್ವರಿತವಾಗಿ ಹಾಳಾಗಬಹುದಾದ ಉತ್ಪನ್ನಗಳ ಸಾಗಣೆಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಸರಕು ಸಾಗಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 10ರಿಂದ ಶೇ 15ರಷ್ಟು ವೃದ್ಧಿ ಕಂಡುಬರುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಪ್ರಾಯೋಗಿಕ ಕಾರ್ಯಾಚರಣೆ:ಬೆಂಗಳೂರು ರೈಲ್ವೆ ವಿಭಾಗವು ಡಿ. 7ರಿಂದ 17ರವರೆಗೆ ಆರು ಜೋಡಿ ರೈಲುಗಳನ್ನು ಪ್ರಾಯೋಗಿಕವಾಗಿ ಕಾರ್ಯಾಚರಿಸಲು ನಿರ್ಧರಿಸಿದೆ. ಪ್ರಯಾಣಿಕರು ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದೆ ಈ ರೈಲುಗಳಲ್ಲಿ ಸಂಚರಿಸಬಹುದು. ಇದಕ್ಕೆ ಜನರ ಸ್ಪಂದನೆ ನೋಡಿಕೊಂಡು, ಸೇವೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದ ಅಶೋಕ್‌ಕುಮಾರ್‌, ಪ್ರಸ್ತುತ ಬೆಂಗಳೂರಿನಿಂದ ಮೈಸೂರು ಮತ್ತು ಹುಬ್ಬಳ್ಳಿಗೆ ಸೇವೆ ಒದಗಿಸುತ್ತಿರುವ ರೈಲುಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಎಲ್ಲ ಆಸನಗಳೂ ಭರ್ತಿ ಆಗುತ್ತಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.