
ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಾಲ್ವರು ರೈಲ್ವೆ ಮಹಿಳಾ ಕ್ರೀಡಾಪಟುಗಳನ್ನು ಅಖಿಲ ಭಾರತ ಹಿಂದುಳಿದ ವರ್ಗಗಳ ರೈಲ್ವೆ ನೌಕರರ ಸಂಘವು (ಎಐಒಬಿಸಿ) ನಗರದಲ್ಲಿ ಶುಕ್ರವಾರ ಸನ್ಮಾನಿಸಿದೆ.
ಎಐಒಬಿಸಿ ನವೀಕರಿಸಲಾದ ಕಚೇರಿಯ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ರಿಲೇ ಓಟಗಾರ್ತಿ ಪ್ರಿಯಾ, ಬಹುವಿಭಾಗದ ಆಟಗಾರ್ತಿ ವನಜಾಕ್ಷಿ, ಹೈಜಂಪ್ ಆಟಗಾರ್ತಿ ಜ್ಯೋತಿ ಲಖವನ್, ಓಟಗಾರ್ತಿ ಹರ್ಷಿತಾ, ಅವರು ಸನ್ಮಾನ ಸ್ವೀಕರಿಸಿದರು.
ಬೆಂಗಳೂರು ವಿಭಾಗೀಯ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿಯಾ ಮಾತನಾಡಿ, ‘ನೌಕರರ ಸಬಲೀಕರಣ, ಸಮುದಾಯದ ಪ್ರಗತಿಗಾಗಿ ಎಐಒಬಿಸಿ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ’ ಎಂದು ಶ್ಲಾಘಿಸಿದರು.
ಹಣಕಾಸು ಸಲಹೆಗಾರ್ತಿ ಮತ್ತು ಮುಖ್ಯ ಲೆಕ್ಕಪತ್ರ ಅಧಿಕಾರಿ ಕುಸುಮಾ ಹರಿಪ್ರಸಾದ್ ಮಾತನಾಡಿ, ‘ಕ್ರೀಡೆಯಲ್ಲಿ ಸಾಧನೆ ಮಾಡಿದ ನಮ್ಮ ನೌಕರರನ್ನು ಸನ್ಮಾನಿಸುವ ಮೂಲಕ ಅವರಿಗೆ ಬೆಂಬಲ ನೀಡಲಾಗಿದೆ. ಇದು ಎಲ್ಲ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ’ ಎಂದು ಹೇಳಿದರು.
ಬೆಂಗಳೂರು ವಿಭಾಗೀಯ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಟರಕಿ, ಎಐಒಬಿಸಿ ಪೋಷಕ ನೆ.ಲ. ನರೆಂದ್ರ ಬಾಬು, ಎಐಒಬಿಸಿ ಪ್ರಧಾನ ಕಾರ್ಯದರ್ಶಿ ಗೋವರ್ಧನ್ ವೈ, ವಲಯ ಅಧ್ಯಕ್ಷ ಪೆಮ್ಮಡಿ ರಾಜೇಶ್, ವಿಭಾಗೀಯ ಅಧ್ಯಕ್ಷ ಶ್ರೀನಿವಾಸ್ ಕೆ.ಎಸ್., ಕಾರ್ಯದರ್ಶಿ ಉಮೇಶ್, ರೈಲ್ವೆ ಅಧಿಕಾರಿಗಳಾದ ಕೃಷ್ಣಚೈತನ್ಯ, ಉಮಾ ಶರ್ಮಾ, ಪ್ರಿಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.