ADVERTISEMENT

‘ಟಿಕೆಟ್ ಕಲೆಕ್ಟರ್‌’ ಹುದ್ದೆಗೆ ನಕಲಿ ನೇಮಕಾತಿ ಪತ್ರ !

14 ಅಭ್ಯರ್ಥಿಗಳಿಂದ ₹ 45 ಲಕ್ಷ ಪಡೆದು ವಂಚನೆ * ರೈಲ್ವೆ ಇಲಾಖೆ ನೌಕರರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:39 IST
Last Updated 21 ಮೇ 2019, 19:39 IST
   

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ’ಟಿಕೆಟ್ ಕಲೆಕ್ಟರ್‌’ ಹುದ್ದೆ ಕೊಡಿಸು ವುದಾಗಿ ಹೇಳಿ 14 ಅಭ್ಯರ್ಥಿಗಳಿಂದ ₹ 45 ಲಕ್ಷ ಪಡೆದು ವಂಚಿಸಲಾಗಿದ್ದು, ಆ ಸಂಬಂಧ ಬೆಂಗಳೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಬಗ್ಗೆ ಅಭ್ಯರ್ಥಿಯೊಬ್ಬರ ತಂದೆ ಎಂ.ವಿ.ವಿಜಯಕುಮಾರ್ ಎಂಬುವರು ದೂರು ನೀಡಿದ್ದಾರೆ. ರೈಲ್ವೆ ಇಲಾಖೆಯ ನೌಕರರಾದ ರಾಜು (56), ಪ್ರಮೋದ್ (30), ರಾಜ್ಯ ಸರ್ಕಾರದ ನೌಕರರಾದ ಅಲ್ಲಾಭಕ್ಷ (50) ಮತ್ತು ರಮೇಶ್ (50) ಎಂಬುವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸ್ನೇಹಿತರು ಹಾಗೂಪರಿಚಯಸ್ಥರ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪಿಗಳು, ’ಟಿಕೆಟ್ ಕಲೆಕ್ಟರ್‌’ ಹುದ್ದೆಗೆಪ್ರತಿಯೊಬ್ಬರಿಂದ ತಲಾ ₹ 4 ಲಕ್ಷ ಪಡೆದುಕೊಂಡಿದ್ದರು. ವರ್ಷ ಕಳೆದರೂ ಕೆಲಸ ಕೊಡಿಸಿರಲಿಲ್ಲ. ಅಭ್ಯ ರ್ಥಿಗಳು ಹಣ ವಾಪಸು ಕೇಳಲಾರಂಭಿಸುತ್ತಿದ್ದಂತೆ, ಅವರಿಗೆಲ್ಲ ದೆಹಲಿಯ ಕೇಂದ್ರ ರೈಲ್ವೆ ಇಲಾಖೆ ಹೆಸರಿನಲ್ಲಿ ನೇಮಕಾತಿ ಪತ್ರಗಳನ್ನೂ ಕೊಟ್ಟಿದ್ದರು. ಅದನ್ನು ಹಿಡಿದುಕೊಂಡು ಕೆಲಸಕ್ಕೆ ಸೇರಲು ಅಭ್ಯರ್ಥಿಗಳು ರೈಲ್ವೆ ಕಚೇರಿಗೆ ಹೋದಾಗಲೇ ಆ ಪತ್ರಗಳು ನಕಲಿ ಎಂಬುದು ಗೊತ್ತಾಗಿತ್ತು’ ಎಂದು ತಿಳಿಸಿದರು.

ADVERTISEMENT

ತಂದೆ– ಮಗ ಇಬ್ಬರೂ ರೈಲ್ವೆ ನೌಕರರು: ‘ಆರೋಪಿ ರಾಜು, ರೈಲ್ವೆ ಇಲಾಖೆಯ ಪಾರ್ಸಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಗ ಪ್ರಮೋದ್, ಪಾಯಿಂಟ್ಸ್‌ಮನ್ ಆಗಿದ್ದರು. ಇತರೆ ಆರೋಪಿಗಳು, ತಂದೆ– ಮಗನಿಗೆ ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ದೂರುದಾರ ಎಂ.ವಿ.ವಿಜ ಯಕುಮಾರ್, ಆಂಧ್ರಪ್ರದೇಶದ ಹಿಂದೂಪುರದವರು. ಆಗಾಗ ಬೆಂಗಳೂರಿಗೆ ಬರುತ್ತಿದ್ದ ಅವರಿಗೆ ಜಲ ಮಂಡಳಿಯ ಉದ್ಯೋಗಿ ಅಲ್ಲಾಭಕ್ಷನ ಪರಿಚಯವಾಗಿತ್ತು. ಆತನೇ ಅವರಿಗೆ ರಮೇಶ್‌ನ ಪರಿಚಯ ಮಾಡಿಸಿದ್ದ.’

‘ಅಲ್ಲಾಭಕ್ಷ ಹಾಗೂ ರಮೇಶ್, ವಿಜಯ್‌ಕುಮಾರ್‌ ಅವರನ್ನು ಗಾಂಧಿನಗರದ ಸನ್ಮಾನ್ ಹೋಟೆಲ್‌ಗೆ ಕರೆದೊಯ್ದು ರಾಜು ಹಾಗೂ ಪ್ರಮೋದ್‌ನನ್ನು ಪರಿಚಯ ಮಾಡಿಸಿಕೊಟ್ಟಿದ್ದರು. ‘ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನಮಗೆ ಪರಿಚಯ. ₹ 4 ಲಕ್ಷ ಕೊಟ್ಟರೆ ನಿಮ್ಮ ಮಗನಿಗೆ ಟಿಕೆಟ್ ಕಲೆಕ್ಟರ್ ಕೆಲಸ ಕೊಡಿಸುತ್ತೇನೆ’ ಎಂದು ರಾಜು ಆಮಿಷವೊಡ್ಡಿದ್ದ. ಅದನ್ನು ನಂಬಿದ್ದ ದೂರುದಾರ, ಹಣ ಕೊಟ್ಟಿದ್ದರು.’

‘ವಿಜಯಕುಮಾರ್ ಅವರ ರೀತಿಯಲ್ಲೇ 13 ಮಂದಿ ಆರೋಪಿಗಳಿಗೆ ಹಣ ಕೊಟ್ಟಿದ್ದರು. ಅವರಿಗೆಲ್ಲ ನಕಲಿ ನೇಮಕಾತಿ ಪತ್ರಗಳನ್ನು ಕೊಟ್ಟು ವಂಚಿಸಲಾಗಿದೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.