ADVERTISEMENT

ಪ್ರಯಾಣಿಕರ ಸುಲಿಗೆ: ಆಟೊ ಚಾಲಕರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:59 IST
Last Updated 6 ಮಾರ್ಚ್ 2023, 20:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೈಲು ಪ್ರಯಾಣಿಕರನ್ನು ಬಾಡಿಗೆ ನೆಪದಲ್ಲಿ ಆಟೊಗೆ ಹತ್ತಿಸಿಕೊಂಡು ಸುಲಿಗೆ ಮಾಡಿದ್ದ ಆರೋಪದಡಿ ಇಬ್ಬರು ಚಾಲಕರನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

‘ಬಾಣಸವಾಡಿ ಸುಬ್ಬಯ್ಯನಪಾಳ್ಯದ ಆರ್. ರೊಬಿನ್ (48) ಹಾಗೂ ಮಾರುತಿ ಸೇವಾನಗರದ ಎಂ. ಯುವರಾಜ್ (39) ಬಂಧಿತರು. ಇವರಿಂದ ₹ 1,157 ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಸ್ಸಾಂನ ಮಿಂಟು, ಮೂವರು ಸ್ನೇಹಿತರು ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಊರಿಗೆ ಹೋಗಿದ್ದ ನಾಲ್ವರು ರೈಲಿನಲ್ಲಿ ಫೆ. 2ರಂದು ಮಧ್ಯಾಹ್ನ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದಿಳಿದಿದ್ದರು. ಮಾಗಡಿ ರಸ್ತೆಯ ಸುಮನಹಳ್ಳಿಗೆ ಹೋಗಲು ಆಟೊಗಾಗಿ ಕಾಯುತ್ತ ನಿಲ್ದಾಣದ ಎದುರಿನ ರಸ್ತೆಯಲ್ಲಿ ನಿಂತಿದ್ದರು.’

ADVERTISEMENT

‘ಆಟೊದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ‘₹ 600 ಪ್ರಯಾಣ ದರವಾಗುತ್ತದೆ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ಕಾರ್ಮಿಕರು, ಆಟೊ ಹತ್ತಿದ್ದರು. ಸ್ವಲ್ಪ ದೂರಕ್ಕೆ ಹೋಗುತ್ತಿದ್ದಂತೆ ಆಟೊ ನಿಲ್ಲಿಸಿದ್ದ ಆರೋಪಿಗಳು, ‘ನಾಲ್ವರೂ ತಲಾ ₹ 600 ನೀಡಬೇಕು’ ಎಂದು ಹೇಳಿದ್ದರು. ಅದಕ್ಕೆ ಕಾರ್ಮಿಕರು ಒಪ್ಪಿರಲಿಲ್ಲ.’

‘ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು, ಕಾರ್ಮಿಕರೊಬ್ಬರ ಬಳಿಯ ₹ 500 ಕಿತ್ತುಕೊಂಡಿದ್ದರು. ಮತ್ತೊಬ್ಬನ ಮೊಬೈಲ್‌ ಕಿತ್ತುಕೊಂಡು, ಫೋನ್‌ ಪೇ ಮೂಲಕ ₹ 3,300 ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದರು’ ಎಂದು ಹೇಳಿದರು.

‘ಠಾಣೆಗೆ ಬಂದುದೂರು ನೀಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

ದಂಪತಿ ಸುಲಿಗೆ– ಬಂಧನ: ಸ್ವಾಮಿ ಮೊದಲಿಯಾರ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೊರಟಿದ್ದ ದಂಪತಿ ಬೆದರಿಸಿ ₹ 1,000 ಸುಲಿಗೆ ಮಾಡಿದ್ದ ಆರೋಪಿ ಇಮ್ರಾನ್ ಶರೀಫ್ (23) ಎಂಬಾತನನ್ನು ಸಾರ್ವಜನಿಕರೇ ಹಿಡಿದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.