ADVERTISEMENT

ಎಕ್ಸ್‌ಪ್ರೆಸ್‌ ರೈಲುಗಳ ತಾತ್ಕಾಲಿಕ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 21:01 IST
Last Updated 25 ಅಕ್ಟೋಬರ್ 2021, 21:01 IST

ಬೆಂಗಳೂರು: ಬೆಂಗಳೂರು–ಹಿಂದೂಪುರ ನಡುವೆ ಮೆಮು ರೈಲುಗಳ ಸಂಚಾರವನ್ನು 46 ದಿನಗಳ ಕಾಲ ರದ್ದುಪಡಿಸಿರುವುದರಿಂದ ಆ ಮಾರ್ಗದಲ್ಲಿ ಸಂಚರಿಸುವ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ತಾತ್ಕಾಲಿಕ ನಿಲುಗಡೆಗೆ ನೈರುತ್ಯ ರೈಲ್ವೆ ಅವಕಾಶ ಕಲ್ಪಿಸಿದೆ.

ಮೈಸೂರು–ಬಾಗಲಕೋಟೆ, ಧಾರವಾಡ–ಮೈಸೂರು, ಕಾಚಿಗೂಡು–ಯಲಹಂಕ, ಬೆಂಗಳೂರು– ಮುಂಬೈ ರೈಲುಗಳನ್ನು ರಾಜಾನುಕುಂಟೆ, ವಡ್ಡರಹಳ್ಳಿ, ಮಾಕಳಿದುರ್ಗ, ತೊಂಡೆಬಾವಿ, ಸೋಮೇಶ್ವರ, ವಿದುರಾಶ್ವತ್ಥ, ದೇವರಪಲ್ಲಿಯಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

‘ಮೈಸೂರು–ಬಾಗಲಕೋಟೆ ಮತ್ತು ಧಾರವಾಡ– ಮೈಸೂರು ರೈಲುಗಳಿಗೆ ಹೆಚ್ಚುವರಿ ಎರಡು ಸಾಮಾನ್ಯ ಬೋಗಿಗಳನ್ನು ಅಳವಡಿಸಿ ಕಾಯ್ದಿರಿಸದ ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಉಳಿದ ರೈಲುಗಳಲ್ಲಿ ಕಾಯ್ದಿರಿಸಿದ ಬೋಗಿಗಳಲ್ಲೇ ಖಾಲಿ ಸೀಟುಗಳಲ್ಲಿ ಕುಳಿತು ಪ್ರಯಾಣಿಸಲು ಅನುಮತಿ ನೀಡಲಾಗಿದೆ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ.‌

ADVERTISEMENT

ಜೋಡಿ ಮಾರ್ಗ ನಿರ್ಮಾಣಕ್ಕೆ ಹಿಂದೂಪುರ ಮತ್ತು ದೇವರಪಲ್ಲಿ ನಿಲ್ದಾಣಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಈ ಮಾರ್ಗದಲ್ಲಿ ಎರಡು ಮೆಮು ರೈಲುಗಳ ಸಂಚಾರವನ್ನು46 ದಿನಗಳ ಕಾಲ ರದ್ದುಗೊಳಿಸಿದೆ. ಇದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ರೈಲು ಪ್ರಯಾಣಿಕರು ಧ್ವನಿ ಎತ್ತಿದ್ದರು.

‘ತಾತ್ಕಾಲಿಕವಾಗಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಅವಕಾಶ ಮತ್ತು ಪಾಸ್ ಪಡೆದಿರುವ ಪ್ರಯಾಣಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಿರುವುದು ಒಳ್ಳೆಯದು’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.