ADVERTISEMENT

ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ: ರೈಲ್ವೆ ಟಿಕೆಟ್ ನಿರೀಕ್ಷಕ ಸೆರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:13 IST
Last Updated 20 ಮಾರ್ಚ್ 2023, 20:13 IST
ಸಂತೋಷ್‌            ಕುಮಾರ್
ಸಂತೋಷ್‌ ಕುಮಾರ್   

ಬೆಂಗಳೂರು: ಟಿಕೆಟ್ ತಪಾಸಣೆ ನೆಪದಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ರೈಲ್ವೆ ಇಲಾಖೆಯ ಮುಖ್ಯ ಟಿಕೆಟ್ ನಿರೀಕ್ಷಕ ವಿ. ಸಂತೋಷ್‌ಕುಮಾರ್ (42) ಅವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

‘ಟಿ.ಸಿ. ಪಾಳ್ಯ ಮುಖ್ಯರಸ್ತೆಯ ಪಿ.ಎನ್‌.ಟಿ ಬಡಾವಣೆ ನಿವಾಸಿ ಸಂತೋಷ್‌ಕುಮಾರ್, ಕೆ.ಆರ್. ಪುರ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. 27 ವರ್ಷದ ಯುವತಿಯೊಬ್ಬರು ಇತ್ತೀಚೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ರೈಲ್ವೆ ಎಸ್ಪಿ ಎಸ್‌.ಕೆ. ಸೌಮ್ಯಲತಾ ತಿಳಿಸಿದರು.

ಪ್ರಕರಣದ ವಿವರ: ‘ಪಶ್ಚಿಮ ಬಂಗಾಳದ ಸಂತ್ರಸ್ತ ಯುವತಿ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಮಾರತ್ತಹಳ್ಳಿಯಲ್ಲಿ ವಾಸವಿದ್ದಾರೆ. ಇತ್ತೀಚೆಗೆ ತಮ್ಮೂರಿಗೆ ಹೋಗಿದ್ದ ಅವರು, ಮಾರ್ಚ್ 13ರಂದು ಬೆಂಗಳೂರಿಗೆ ರೈಲಿನಲ್ಲಿ ವಾಪಸು ಬಂದಿದ್ದರು. ಮಾರತ್ತಹಳ್ಳಿಗೆ ಹೋಗುವುದಕ್ಕಾಗಿ ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಇಳಿದು
ಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಲಗೇಜುಗಳ ಸಮೇತ ಯುವತಿ ನಿಲ್ದಾಣದಿಂದ ಹೊರಗೆ ಹೊರಟಿದ್ದರು. ಪ್ರಯಾಣಿಕರ ಸಂದಣಿ ಹೆಚ್ಚಿತ್ತು. ಅವರನ್ನು ತಡೆದಿದ್ದ ಆರೋಪಿ ಸಂತೋಷ್‌ಕುಮಾರ್, ಟಿಕೆಟ್ ತೋರಿಸುವಂತೆ ಹೇಳಿದ್ದರು. ಟಿಕೆಟ್ ಬ್ಯಾಗ್‌ನಲ್ಲಿರುವುದಾಗಿ ಹೇಳಿದ್ದ ಯುವತಿ, ‘ಸ್ವಲ್ಪ ಸಮಯ ನೀಡಿ. ಬ್ಯಾಗ್‌ನಲ್ಲಿರುವ ಟಿಕೆಟ್ ತೆಗೆದು ತೋರಿಸುತ್ತೇನೆ’ ಎಂದಿದ್ದರು. ಅಷ್ಟಕ್ಕೆ ಸಿಟ್ಟಾಗಿದ್ದ ಆರೋಪಿ, ಬ್ಯಾಗ್‌ ಹಿಡಿದು ಎಳೆದಾಡಿದ್ದ. ತನ್ನ ಬಳಿಯ ಪೆನ್‌ನಿಂದ ಯುವತಿ ಮುಖದ ಮೇಲೆ ಬರೆಯಲು ಯತ್ನಿಸಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿ
ಜೀವ ಬೆದರಿಕೆಯೊಡ್ಡಿದ್ದ’ ಎಂದು ತಿಳಿಸಿದರು.

‘ಮದ್ಯ ಸೇವಿಸಿ ಕೆಲಸ ಮಾಡುತ್ತಿದ್ದ ಸಂತೋಷ್‌ಕುಮಾರ್, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಯುವತಿ ಟ್ವೀಟ್ ಮಾಡಿದ್ದರು. ಜೊತೆಗೆ, ಯುವತಿ ಮೇಲಿನ ದೌರ್ಜನ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ನಂತರ, ಯುವತಿಯನ್ನು ಸಂಪರ್ಕಿಸಿ ದೂರು ಪಡೆಯಲಾಗಿತ್ತು. ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಇತರೆ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದೆ’ ಎಂದು ಹೇಳಿದರು.

ಸೇವೆಯಿಂದ ಅಮಾನತು: ಘಟನೆ ಬಗ್ಗೆ ಯುವತಿ ಟ್ವೀಟ್ ಮಾಡುತ್ತಿದ್ದಂತೆ ಪ್ರಾಥಮಿಕ ತನಿಖೆ ನಡೆಸಿದ್ದ ರೈಲ್ವೆ ಇಲಾಖೆ, ಆರೋಪಿ ಸಂತೋಷ್‌ಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.