ADVERTISEMENT

ತ್ವರಿತವಾಗಿ ಸ್ಪಂದಿಸದಿದ್ದರೆ ಕ್ರಮ ಮುಖ್ಯ ಆಯುಕ್ತ ಎಚ್ಚರಿಕೆ

ಬಿಬಿಎಂಪಿ: ಮೂರು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 19:16 IST
Last Updated 13 ಏಪ್ರಿಲ್ 2022, 19:16 IST

ಬೆಂಗಳೂರು: ಮಳೆ ಬಂದಾಗ ರಸ್ತೆ ಅಥವಾ ಜಂಕ್ಷನ್‌ಗಳಲ್ಲಿ ನೀರು ನಿಂತಿರುವ ಅಥವಾ ಮರಗಳು ಬಿದ್ದಿರುವ ಕುರಿತ ದೂರುಗಳು ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದರು.

ನಗರದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಅವರು ಅಧಿಕಾರಿ
ಗಳ ಜೊತೆ ವರ್ಚುವಲ್ ರೂಪದಲ್ಲಿ ಬುಧವಾರ ತುರ್ತು ಸಭೆ ನಡೆಸಿದರು.

‘ಎಲ್ಲಾ ವಲಯ ನಿಯಂತ್ರಣ ಕೊಠಡಿಗಳಲ್ಲಿ ಅವಶ್ಯಕ ಪರಿಕರಗಳು, ಯಂತ್ರೋಪಕರಣಗಳು ಲಭ್ಯ ಇರಬೇಕು. ಸಿಬ್ಬಂದಿಯೂ ಸನ್ನದ್ಧವಾಗಿರಬೇಕು.ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕಂದಾಯ, ಆರೋಗ್ಯ, ಕಸ ವಿಲೇವಾರಿ ವಿಭಾಗಗಳ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳ ಸೇವೆಯನ್ನೂ ಬಳಸಿಕೊಳ್ಳಬೇಕು. ಮಳೆಯಿಂದ ಎದುರಾಗುವ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಆಯಾ ವಲಯದ ಹಿರಿಯ ಅಧಿಕಾರಿ
ಗಳು ಸಭೆ ನಡೆಸಬೇಕು’ ಎಂದು ಸೂಚನೆ ನೀಡಿದರು. ‘ಮಳೆ ಬಂದಾಗ ನೀರು ನಿಲ್ಲುವ ಸಂಭಾವ್ಯ ಜಾಗಗಳನ್ನು ಗುರುತಿಸಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ನಿಯಂತ್ರಣ ಕೊಠಡಿಗಳಿಗೆ ಕರೆ ಬಂದ ಕೂಡಲೇ ಪಾಲಿಕೆಯ ತುರ್ತು ಸ್ಪಂದನೆ ತಂಡವು ಸ್ಥಳಕ್ಕೆ ಧಾವಿಸಬೇಕು. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ತೆ ಕಲ್ಪಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು’ ಎಂದು ಸೂಚನೆನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.