ADVERTISEMENT

ರಾಜರಾಜೇಶ್ವರಿನಗರ | ಬಿರುಸಿನ ಮಳೆ; ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:14 IST
Last Updated 20 ಅಕ್ಟೋಬರ್ 2024, 16:14 IST
ರಾಮನಾಥನಗರ ಬಡಾವಣೆಯ ರಸ್ತೆಯಲ್ಲಿ ನಿಂತಿರುವ ಮಳೆ ನೀರು
ರಾಮನಾಥನಗರ ಬಡಾವಣೆಯ ರಸ್ತೆಯಲ್ಲಿ ನಿಂತಿರುವ ಮಳೆ ನೀರು   

ರಾಜರಾಜೇಶ್ವರಿನಗರ: ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಯಿಂದಾಗಿ ನಾಗದೇವನಹಳ್ಳಿ ಬಳಿಯ ರಾಮನಾಥನಗರ ಬಡಾವಣೆಯ ಸುಮಾರು 25 ಮನೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಯಿತು !

ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಜನರು ಹರಸಾಹಸಪಟ್ಟರು. ನೆಲಮಹಡಿಯಲ್ಲಿದ್ದ ಕೆಲವು ವಾಹನಗಳು ನೀರಿನಲ್ಲಿ ಮುಳುಗಿದವು. ನೀರು ತುಂಬಿಕೊಂಡಿದ್ದರಿಂದ ದಿಗಿಲುಬಿದ್ದವರು, ಮನೆಯ ಮೊದಲ ಮಹಡಿಯಲ್ಲಿ ಆಶ್ರಯಪಡೆದರು.

ಉಲ್ಲಾಳು ವಾರ್ಡ್‍ನ ನಾಗದೇವನಹಳ್ಳಿಯ ಜ್ಞಾನ ಬೋಧಿನಿ ಮುಖ್ಯರಸ್ತೆಯ ಮೇಲ್ಭಾಗದಲ್ಲಿರುವ ಆರ್.ಆರ್.ಬಡಾವಣೆ, ಮರಿಯಪ್ಪನಪಾಳ್ಯದಿಂದ ಮಳೆ ನೀರು ಮತ್ತು ಒಳ ಚರಂಡಿ ನೀರು ರಾಮನಾಥನಗರ ಬಡಾವಣೆ ಮೂಲಕ ದುಬಾಸಿಪಾಳ್ಯ ಕೆರೆಗೆ ಸೇರುತ್ತದೆ. ಕೆರೆ ಸಮೀಪದಲ್ಲೇ ಬಡಾವಣೆಯಿದೆ. ನೀರು ಹರಿಯುವ ಮೋರಿ ಕಿರಿದಾಗಿದ್ದು ಹಾಗೂ ಅದರಲ್ಲಿ ಹೆಚ್ಚು ಹೂಳು ತುಂಬಿದ್ದರಿಂದ, ಮಳೆ ನೀರು ಸರಾಗವಾಗಿ ಹರಿಯದೇ, ಸುತ್ತಮುತ್ತಲಿನ ಬಡಾವಣೆಗಳಿಗೆ ನುಗ್ಗಿದೆ’ ಎಂದು ನಾಗರಿಕರು ದೂರಿದರು.

ADVERTISEMENT

ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಹಲವು ಮನೆಗಳಿಗೆ ನೀರು ನುಗ್ಗಿದರಿಂದ ನರಕಯಾತನೆ ಅನುಭವಿಸಿದ್ದೇವೆ ಎಂದು ಸ್ಥಳೀಯ ನಿವಾಸಿ ಜಗದೀಶ್ ಬೇಸರ ವ್ಯಕ್ತಪಡಿಸಿದರು. ಪಾರ್ಕಿಂಗ್ ಬದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ದ್ವಿಚಕ್ರವಾಹನ, ಕಾರು ನೀರಿನಲ್ಲಿ ಮುಳುಗಿವೆ. ಮಳೆ ನೀರಿನ ಜೊತೆಗೆ ಹಾವು ನುಗ್ಗಿತ್ತು. ಉರುಗ ತಜ್ಞರನ್ನು ಕರೆಯಿಸಿ ಹಾವನ್ನು ರಕ್ಷಣೆ ಮಾಡಲಾಯಿತು’ ಎಂದು ಅವರು ವಿವರಿಸಿದರು.

‘ಮುಂಜಾನೆ 6 ಗಂಟೆಯಲ್ಲಿ ಏಕಾಏಕಿ ಮಳೆ ನೀರಿನ ಜೊತೆ, ಚರಂಡಿನೀರು ಮನೆಗೆ ನುಗ್ಗಿತು. ಕುಟುಂಬಸ್ಥರೆಲ್ಲ ಮನೆಯ ಮಹಡಿಗೆ ಹೋಗಿ ಆಶ್ರಯ ಪಡೆದವು’ ಎಂದು ಮತ್ತೊಬ್ಬ ನಿವಾಸಿ ನೀಲಾ ಘಟನೆಯನ್ನು ವಿವರಿಸಿದರು.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್, ಸಹಾಯಕ ಎಂಜಿನಿಯರ್ ನರಸಿಂಹ ನಾಯಕ್ ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಮೂಲಕ ರಾಜಕಾಲುವೆ ಬಳಿ ಹೂಳು ತೆಗೆಸಿದರು. ನಂತರ ನೀರು ಸರಾಗವಾಗಿ ಕೆರೆಯತ್ತ ಹರಿಯಿತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಜಂಟಿ ಆಯುಕ್ತ ಅಜಯ್.ವಿ, ’ಕೆರೆಗೆ ಸಮನಾಗಿ ಬಡಾವಣೆ ನಿರ್ಮಿಸಿರುವುದು, ರಾಜ ಕಾಲುವೆ ಪಥ ಬದಲಾಯಿಸಿದ್ದರಿಂದ ಸಮಸ್ಯೆಯಾಗಿದೆ. ಸರ್ವೆ ಇಲಾಖೆ, ಕಂದಾಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿರುವ ಮಳೆ ನೀರು
ಚರಂಡಿ ದುರಸ್ಥಿಗೊಳಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ 

’ದೂರು ನೀಡಿದ್ದೆವು ಗಮನಹರಿಸಿರಲಿಲ್ಲ’

‘ಮಳೆ ಬಂದಾಗ ಮೇಲ್ಭಾಗದ ಬಡಾವಣೆಗಳಿಂದ ಭಾರಿ ನೀರು ಹರಿದುಬರುತ್ತದೆ ರಾಜಕಾಲುವೆ ಅಗಲ ಮಾಡಿ ಎಂದು ಈ ಹಿಂದೆ ಹಲವು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದೆವು. ಆದರೂ ಅವರು ಗಮನ ಹರಿಸಿರಲಿಲ್ಲ. ಹಿಂದೆ ಈ ವಾರ್ಡ್‌ ಕೆಂಗೇರಿಗೆ ಸೇರಿತ್ತು. ಅಧಿಕಾರಿಗಳ ಎಚ್ಚೆತ್ತುಕೊಂಡಿದ್ದರೆ ಈ ಸಮಸ್ಯೆಯಾಗುತ್ತಿರಲಿಲ್ಲ’ ಎಂದು ಸ್ಥಳೀಯ ನಿವಾಸಿ ಎನ್.ಸಿ.ಕುಮಾರ್  ದೂರಿದರು. ಬಡಾವಣೆ ನಿರ್ಮಾಣ ಮಾಡಿದ ಮಾಲೀಕರು ಸರಿಯಾದ ರಸ್ತೆ ಒಳಚರಂಡಿ ಮಾಡಿದ್ದರೆ  ಇಂಥ ಅನಾಹುತವಾಗುತ್ತಿರಲಿಲ್ಲ ಎಂದು ನಿವಾಸಿಗಳು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.