ADVERTISEMENT

ಬೆಂಗಳೂರು: ಒಂದೇ ಮಳೆಗೆ ಬಾಯ್ದೆರೆದ ಗುಂಡಿ

ನಗರದ ಪ್ರಮುಖ ರಸ್ತೆಗಳೆಲ್ಲ ಗುಂಡಿಮಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:22 IST
Last Updated 26 ನವೆಂಬರ್ 2021, 16:22 IST
ಅಂಬೇಡ್ಕರ್ ವೀದಿಯ ಕಾಫಿ ಮಂಡಳಿ ಬಳಿ ರಸ್ತೆಯೇ ಹೊಂಡವಾಗಿರುವುದು –ಪ್ರಜಾವಾಣಿ ಚಿತ್ರ
ಅಂಬೇಡ್ಕರ್ ವೀದಿಯ ಕಾಫಿ ಮಂಡಳಿ ಬಳಿ ರಸ್ತೆಯೇ ಹೊಂಡವಾಗಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು:ಮುಚ್ಚಿದ್ದ ಗುಂಡಿಗಳು ಒಂದೇ ಮಳೆಗೆ ಬಾಯ್ದೆರೆದುಕೊಂಡವು, ರಸ್ತೆ ಮೇಲೆಲ್ಲ ಗುಂಡಿ, ಸವಾರರ ಮೈಮೇಲೆ ದೂಳೋ ದೂಳು...

ಇದು ನಗರದ ಬಹುತೇಕ ರಸ್ತೆಗಳ ಸ್ಥಿತಿ. ನಗರದ ಯಾವುದೇ ರಸ್ತೆಗೆ ವಾಹನ ಇಳಿಸಿದರೂ ಗುಂಡಿಗಳ ದರ್ಶನ ಆಗದೆ ಇರದು. ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಮುಖ್ಯ ರಸ್ತೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಕಬ್ಬನ್ ಪಾರ್ಕ್‌ ಮೆಟ್ರೊ ರೈಲು ನಿಲ್ದಾಣದಿಂದ ರಾಜಭವನ ರಸ್ತೆಯಲ್ಲಿ ಹೊರಟರೆ ಗುಂಡಿಗಳ ದರ್ಶನವಾಗುತ್ತದೆ. ಅಂಬೇಡ್ಕರ್ ವೀದಿಯಲ್ಲಿ ವಿಧಾನಸೌಧದ ಎದುರು ವೈಟ್‌ಟಾಪಿಂಗ್ ರಸ್ತೆ ಬಿಟ್ಟರೆ ಕಾಫಿ ಮಂಡಳಿ ಮತ್ತು ಎಂಜಿನಿಯರಿಂಗ್‌ ಸಂಸ್ಥೆ ಎದುರು ರಸ್ತೆಗಳಲ್ಲಿ ಗುಂಡಿಗಳು ಎದುರಾಗುತ್ತವೆ.

ADVERTISEMENT

ಅಲಿ ಅಸ್ಕರ್ ರಸ್ತೆ, ಇನ್‌ಫೆಂಟ್ರಿ ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿ ಬಿದ್ದಿವೆ. ಶಾಂಗ್ರಿಲಾ ಹೋಟೆಲ್ ಎದುರಿನ ಅರಮನೆ ರಸ್ತೆ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆ ಕೂಡುವ ವೃತ್ತದಲ್ಲಿ ಗುಂಡಿಗಳು ಇಡೀ ರಸ್ತೆಗೆ ಚಾಚಿಕೊಂಡಿವೆ.

ಮಿಲ್ಲರ್ಸ್‌ ರಸ್ತೆಯಲ್ಲೂ ಗುಂಡಿಗಳು ರಸ್ತೆಯನ್ನು ತುಂಬಿಕೊಂಡಿವೆ. ನಗರ ಕೇಂದ್ರ ಪ್ರದೇಶದ ಬಹುತೇಕ ರಸ್ತೆಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಿರ್ವಹಿಸಿ ಅರ್ಧಕ್ಕೆ ನಿಲ್ಲಿಸಲಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮೇಖ್ರಿ ವೃತ್ತ ತನಕದ ಜಯಮಹಲ್ ರಸ್ತೆಯಲ್ಲೂ ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಯತ್ನಿಸಿ ಮತ್ತೊಂದು ಗುಂಡಿಗೆ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆಯಂತೂ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಕಾಣದಾಗಿ ಹಲವರು ಬೀಳುತ್ತಿದ್ದಾರೆ.

ಮಲ್ಲೇಶ್ವರದಿಂದ ಶ್ರೀರಾಮಪುರ ಮಾರ್ಗದಲ್ಲಿ ನವರಂಗ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಹಾಕವಿ ಕುವೆಂಪು ರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲಲ್ಲಿ ಬಿಬಿಎಂಪಿಯಿಂದ ಗುಂಡಿ ಮುಚ್ಚಲಾಗಿತ್ತು. ಕಳೆದ ವಾರ ಸುರಿದ ಮಳೆಗೆ ಆ ಗುಂಡಿಗಳೂ ತೆರೆದುಕೊಂಡಿವೆ.

ಎರಡು ದಿನಗಳಿಂದ ಮಳೆ ಕಡಿಮೆ ಆಗಿದ್ದು, ಗುಂಡಿ ಬಿದ್ದಿರುವ ಯಾವ ರಸ್ತೆಯಲ್ಲಿ ಹೋದರೂ ದೂಳು ತುಂಬಿಕೊಳ್ಳುತ್ತಿದೆ. ದೂಳಿನ ಕಣಗಳು ಕಣ್ಣಿಗೆ ರಾಚುವುದರಿಂದ ದ್ವಿಚಕ್ರ ವಾಹನ ಸವಾರರು ಚಾಲನೆ ಮಾಡುವುದೇ ಕಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.