
ಬೆಂಗಳೂರು: ನಗರದ ವಿವಿಧೆಡೆ ಮಂಗಳವಾರ ಸಂಜೆ 4ರ ಸುಮಾರಿಗೆ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಬಿರುಗಾಳಿ ಮಳೆಯಾಯಿತು.
ನಗರದಾದ್ಯಂತ ಮಧ್ಯಾಹ್ನದವರೆಗೆ ಬಿರುಬಿಸಿಲಿತ್ತು. ಉಷ್ಣಾಂಶವೂ ಹೆಚ್ಚಿತ್ತು. ಮಧ್ಯಾಹ್ನ 3.20ರ ಸುಮಾರಿಗೆ ದಟ್ಟ ಮೋಡಕವಿದ ವಾತಾವರಣ ನಿರ್ಮಾಣವಾಯಿತು. ಸಂಜೆ ಗಾಳಿಯೊಂದಿಗೆ ಬಿರುಸಿನ ಮಳೆ ಆರಂಭವಾಯಿತು. ವಾತಾವರಣ ತಂಪಾಯಿತು. ದಿಢೀರನೆ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಕಾಲುವೆಯಂತಾದವು. ನಗರದ ಕೆಲವೆಡೆ ಮರಗಳ ಕೊಂಬೆ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು.
ಬಾಣಸವಾಡಿ, ಕಲ್ಯಾಣನಗರ, ಮೆಜೆಸ್ಟಿಕ್, ಆನಂದ್‌ರಾವ್ ಸರ್ಕಲ್, ರೇಸ್‌ಕೋರ್ಸ್ ರಸ್ತೆ, ಶಿವಾನಂದ ಸರ್ಕಲ್, ಮಲ್ಲೇಶ್ವರ, ಶೇಷಾದ್ರಿಪುರದ ಸುತ್ತಮುತ್ತ ಬಿರುಸಿನ ಮಳೆಯಾಯಿತು. ಹೆಚ್‌ಬಿಆರ್ ಲೇಔಟ್‌ನಲ್ಲಿ ಬೃಹತ್ ಮರಗಳು ಧರೆಗುರುಳಿದವು. ಮಲ್ಲೇಶ್ವರದ ಪಿಯುಸಿ ಬೋರ್ಡ್, ಕಾವೇರಿ ಜಂಕ್ಷನ್ ಮರಗಳು ಬಿದ್ದಿವೆ. ವಿಂಡ್ಸನ್ ಮ್ಯಾನರ್ ಕೆಳಸೇತುವೆಯಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲೂ ಮರದ ಕೊಂಬೆ ಮುರಿದುಬಿದ್ದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಜೋರು ಮಳೆಯಾಗಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು. ನಾಗವಾರ, ಹೆಬ್ಬಾಳ ಭಾಗಗಳಲ್ಲೂ ಮಳೆ ಬಿರುಸಾಗಿತ್ತು. ಕುಮಾರಸ್ವಾಮಿ ಲೇಔಟ್ ಬಳಿ ನಿರಂತರ ಮಳೆಗೆ ರಸ್ತೆ ತುಂಬೆಲ್ಲಾ ನೀರು ಹರಿದು, ವಾಹನ ಸವಾರರು ಪರದಾಡಿದರು.
ಪೂರ್ವ ಬಾಣಸವಾಡಿಯಲ್ಲಿ 3.7 ಸೆಂ.ಮೀ, ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 3.5 ಸೆಂ.ಮೀ, ಕಾಟನ್‌ಪೇಟೆಯಲ್ಲಿ 2.5 ಸೆಂ.ಮೀ ಮಳೆಯಾಯಿತು. ಹೊರಮಾವು ಮತ್ತು ಕುಶಾಲ್‌ನಗರ ಭಾಗದಲ್ಲಿ 2 ಸೆಂ.ಮೀಗೂ ಅಧಿಕ ಮಳೆಯಾಯಿತು. ಯಲಹಂಕ ಭಾಗದಲ್ಲಿ ಜಕ್ಕೂರು, ಚೌಡೇಶ್ವರಿನಗರ, ಕೊಡಿಗೆಹಳ್ಳಿಯಲ್ಲಿ ಒಂದು ಸೆಂ.ಮೀಗೂ ಅಧಿಕ ಮಳೆಯಾಗಿದೆ. ಮಹದೇವಪುರ, ಪುಲಕೇಶಿ ನಗರದ ಕೆಲವು ಭಾಗಗಳಲ್ಲಿ ಒಂದೂವರೆ ಸೆಂ.ಮೀನಷ್ಟು ಮಳೆಯಾಗಿದೆ.
27 ಮರಗಳು ಧರೆಗೆ:
ಒಟ್ಟು 27 ಮರಗಳು ಮತ್ತು 94 ಕೊಂಬೆಗಳು ಮುರಿದುಬಿದ್ದಿರುವುದಾಗಿ ಬಿಬಿಎಂಪಿಯಲ್ಲಿ ದೂರು ದಾಖಲಾಗಿತ್ತು. 19 ಮರಗಳು ಮತ್ತು 55 ಕೊಂಬೆಗಳನ್ನು ತೆರವುಗೊಳಿಸಿದ್ದು, ಉಳಿದವುಗಳ ತೆರವು ಕಾರ್ಯ ನಡೆಯುತ್ತಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.