ADVERTISEMENT

ಬೆಂಗಳೂರಿನಲ್ಲಿ ಮಳೆ: ಹಲವು ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 19:42 IST
Last Updated 12 ಜುಲೈ 2024, 19:42 IST
ಕಂಟೋನ್ಮೆಂಟ್‌ ಸಮೀಪದ ಕೆಳಸೇತುವೆಯಲ್ಲಿ ಶುಕ್ರವಾರ ಮಳೆ ನೀರು ನಿಂತು ವಾಹಸ ಸಂಚಾರಕ್ಕೆ ಅಡ್ಡಿಯಾಗಿತ್ತು
ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್‌
ಕಂಟೋನ್ಮೆಂಟ್‌ ಸಮೀಪದ ಕೆಳಸೇತುವೆಯಲ್ಲಿ ಶುಕ್ರವಾರ ಮಳೆ ನೀರು ನಿಂತು ವಾಹಸ ಸಂಚಾರಕ್ಕೆ ಅಡ್ಡಿಯಾಗಿತ್ತು ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್‌   

ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಹಲವೆಡೆ ಭಾರಿ ಮಳೆಯಾಯಿತು. ಹಲವು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಮಧ್ಯಾಹ್ನ ಆರಂಭವಾದ ಮಳೆ ಸಂಜೆ ವೇಳೆಗೆ ಹೆಚ್ಚಾಗಿ ಸುರಿಯಿತು. ಇದರಿಂದ ರಸ್ತೆಗಳಲ್ಲಿ ಹೆಚ್ಚು ನೀರು ನಿಂತು ವಾಹನ ದಟ್ಟಣೆ ಉಂಟಾಯಿತು. ರಸ್ತೆ ನೀರು ಚರಂಡಿಗಳಲ್ಲಿ ಹರಿಯದೆ ಸಮಸ್ಯೆ ಉಂಟಾಯಿತು. ಸಂಚಾರ ಸುಗಮಗೊಳಿಸಲು ಪೊಲೀಸರು ಪರದಾಡಿದರು.

198 ವಾರ್ಡ್‌ಗಳ ಪೈಕಿ 138 ವಾರ್ಡ್‌ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗದಲ್ಲಿ ಅತಿಹೆಚ್ಚಿನ ಮಳೆಯಾಯಿತು. ಅರಮನೆ ನಗರ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ, ಕೆಂಗೇರಿ, ಹೆಮ್ಮಿಗೆಪುರ, ನಾಗರಬಾವಿ, ಹೇರೋಹಳ್ಳಿ, ಉತ್ತರಹಳ್ಳಿ, ವಸಂತಪುರ, ಗೊಟ್ಟಿಗೆರೆ, ಬೇಗೂರು, ಯಲಚೇನಹಳ್ಳಿ, ಬಿಟಿಎಂ ಲೇಔಟ್‌, ಬಿಳೇಕಹಳ್ಳಿ, ಪುಟ್ಟೇನಹಳ್ಳಿ, ಶಾಕಾಂಬರಿನಗರ, ಶ್ರೀನಗರ, ವಿದ್ಯಾಪೀಠ, ಹನುಮಂತನಗರ, ಚಾಮರಾಜಪೇಟೆ, ವಿಶ್ವೇಶ್ವರಪುರ, ರಾಯಪುರ, ಹೊಸಹಳ್ಳಿ, ವಿಜಯನಗರ, ಹಂಪಿನಗರ, ರಾಜಾಜಿನಗರ, ಮಲ್ಲೇಶ್ವರ, ಶಾಂತಲಾನಗರ ಸುತ್ತಮುತ್ತ ಪ್ರದೇಶಗಳಲ್ಲಿ ಒಂದು ಸೆಂಟಿ ಮೀಟರ್‌ನಿಂದ ಮೂರು ಸೆಂ.ಮೀನಷ್ಟು ಮಳೆಯಾಗಿದೆ.

ADVERTISEMENT

ಕಾಮರಾಜ ರಸ್ತೆಯ ವಿಠ್ಠಲ ದೇವಸ್ಥಾನದ ಬಳಿ, ಮಹದೇವಪುರದ ಲೋರಿ ಜಂಕ್ಷನ್‌, ಹೊಸೂರು ರಸ್ತೆ ಸಮೀಪದ ವೀರಸಂದ್ರ ಜಂಕ್ಷನ್‌, ಮಾನ್ಯತಾ ಟೆಕ್‌ಪಾರ್ಕ್‌ ಬಳಿಯ ವೀರಣ್ಣಪಾಳ್ಯ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ, ಕ್ವೀನ್ಸ್‌ ರಸ್ತೆಯಿಂದ ಅನಿಲ್‌ ಕುಂಬ್ಳೆ ವೃತ್ತ, ಹೆಬ್ಬಾಳ ಮೇಲ್ಸೇತುವೆಯಿಂದ ಕಸ್ತೂರಿನಗರದ ಕಡೆಗೆ, ಎಲೆಕ್ಟ್ರಾನಿಕ್‌ ಸಿಟಿ ಎರಡನೇ ಹಂತದ ವೀರಸಂದ್ರ, ಸಂಜಯನಗರ ಅಡ್ಡರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆ, ಸ್ಯಾಂಕಿ ರಸ್ತೆ– ಭಾಷ್ಯಂ ವೃತ್ತ, ಪೀಣ್ಯ ಅಯ್ಯಪ್ಪ ದೇವಸ್ಥಾನ ರಸ್ತೆ, ಗೆದ್ದಲಹಳ್ಳಿಯಿಂದ ಬಾಗಲೂರು ಕಡೆಯ ರಸ್ತೆ, ಹುಣಸಮಾರನಹಳ್ಳಿ ಸರ್ವೀಸ್‌ ರಸ್ತೆಯಿಂದ ವಿಮಾನ ನಿಲ್ದಾಣದ ಕಡೆಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ನಿಧಾನಗತಿಯ ಸಂಚಾರದಿಂದ ವಾಹನ ದಟ್ಟಣೆ ಉಂಟಾಗಿತ್ತು.

ಹಡ್ಸನ್‌ ವೃತ್ತದಲ್ಲಿ ಮರದ ದೊಡ್ಡ ಕೊಂಬೆ, ತಿಲಕನಗರ ಮುಖ್ಯರಸ್ತೆಯಲ್ಲಿ ಮರ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಕೆಂಗೇರಿ ಹಾಗೂ ಕುಂಬಳಗೋಡು ನಡುವಿನ ರಸ್ತೆಯಲ್ಲಿ ಶುಕ್ರವಾರ ಮಳೆ ನೀರಿನಲ್ಲೇ ವಾಹನಗಳು ಸಂಚರಿಸಿದವು -ಪ್ರಜಾವಾಣಿ ಚಿತ್ರ ಪ್ರಶಾಂತ್ ಎಚ್‌ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.