ADVERTISEMENT

Rain Water | ಸಾಯಿ ಲೇಔಟ್‌ ಮನೆಗಳಿಗೆ ನುಗ್ಗಿದ ಮಳೆ ನೀರು

ಸತತ ಮಳೆಯಿಂದ ತುಂಬಿದ ರಾಜಕಾಲುವೆ: ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 15:49 IST
Last Updated 18 ಆಗಸ್ಟ್ 2025, 15:49 IST
ಬಿಬಿಎಂಪಿ ಸಿಬ್ಬಂದಿ ಸಾಯಿ ಲೇಔಟ್‌ನಲ್ಲಿ ಮಳೆ ನೀರನ್ನು ಪಂಪ್‌ ಮೂಲಕ ಸೋಮವಾರ ಬೆಳಿಗ್ಗೆ ಹೊರ ಹಾಕಿದರು
ಬಿಬಿಎಂಪಿ ಸಿಬ್ಬಂದಿ ಸಾಯಿ ಲೇಔಟ್‌ನಲ್ಲಿ ಮಳೆ ನೀರನ್ನು ಪಂಪ್‌ ಮೂಲಕ ಸೋಮವಾರ ಬೆಳಿಗ್ಗೆ ಹೊರ ಹಾಕಿದರು   

ಬೆಂಗಳೂರು: ಸಾಯಿ ಲೇಔಟ್‌ ಹಾಗೂ ವಡ್ಡರಪಾಳ್ಯದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರನ್ನು ಹೊರ ಹಾಕಲು ಬಿಬಿಎಂಪಿ ಸಿಬ್ಬಂದಿ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದಾರೆ.

ನಗರದಲ್ಲಿ ಎರಡು ದಿನದಿಂದ ಸತತವಾಗಿ ಮಳೆ ಸುರಿಯುತ್ತಿದ್ದು ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮಹದೇವಪುರ ವಲಯದ ಸಾಯಿ ಲೇಔಟ್‌ಗೆ ರಾಜಕಾಲುವೆಗಳಿಂದ ನೀರು ಹರಿದಿದೆ. 

ರಸ್ತೆ ಹಾಗೂ ಮನೆಗಳಿಗೆ ಹರಿದಿರುವ ರಾಜಕಾಲುವೆ ನೀರನ್ನು ಹೊರ ಹಾಕಲು ಬಿಬಿಎಂಪಿ ಸಿಬ್ಬಂದಿ ಪಂಪ್‌ ಸೆಟ್‌ಗಳನ್ನು ಅಳವಡಿಸಿದ್ದು, ಹಗಲು– ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ನೀರು ಬಡಾವಣೆಗಳಿಗೆ ಹರಿಯುತ್ತಿದೆ.

ADVERTISEMENT

‘ಮಳೆ ನೀರು ಬಡಾವಣೆಗೆ ನುಗ್ಗದಂತೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅಧಿಕಾರಿಗಳು ನಾಲ್ಕೈದು ವರ್ಷಗಳಿಂದ ಭರವಸೆ ನೀಡುತ್ತಲೇ ಇದ್ದಾರೆ. ಆದರೆ, ಮಳೆ ಹೆಚ್ಚಾದಾಗ ನಮ್ಮ ಮನೆಗಳಿಗೆ ಮಳೆ ನೀರು ನುಗ್ಗುವುದು ಕಡಿಮೆಯಾಗಿಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ರಮೇಶ್‌, ಚಿನ್ಮಯಿ, ವಿಮಲಾ ದೂರಿದರು.

ಮಹದೇವಪುರದ ಕಸವನಹಳ್ಳಿ ಪ್ರದೇಶದಲ್ಲಿ ಮಳೆ ನೀರು ಹರಿಯದೆ ನಿಂತಿರುವ ಪ್ರದೇಶಗಳಿಗೆ ಭೇಟಿ ನೀಡಿದ ವಲಯ ಆಯುಕ್ತ ರಮೇಶ್‌ ಅವರು, ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚು ಮಳೆ: ನಗರದಲ್ಲಿ ಭಾನುವಾರ ಬೆಳಿಗ್ಗೆ 8.30ರಿಂದ ಸೋಮವಾರ ಬೆಳಿಗ್ಗೆ 8.30ರವರೆಗೆ ಹಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ.

ಹೊರಮಾವು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 2 ಸೆಂ.ಮೀ ಮಳೆಯಾಗಿದೆ. ಬೆಳ್ಳಂದೂರು, ಅಟ್ಟೂರು, ಬಸವನಗುಡಿ, ಕುಮಾರಸ್ವಾಮಿ ಲೇಔಟ್‌, ಎಚ್‌ಎಸ್ಆರ್‌ ಲೇಔಟ್‌, ಯಲಹಂಕ, ವಿದ್ಯಾಪೀಠ, ಕೋರಮಂಗಲ, ಜಕ್ಕೂರು, ಚೌಡೇಶ್ವರಿನಗರ, ಬ್ಯಾಟರಾಯನಪುರದಲ್ಲಿ 1.2 ಸೆಂ.ಮೀ ಮಳೆಯಾಗಿದೆ.

ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಗರದ ಹಲವು ಪ್ರದೇಶಗಳಲ್ಲಿ ಆಗಾಗ್ಗೆ ಮಳೆ ಸುರಿಯಿತು. ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ದಟ್ಟಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.