ADVERTISEMENT

‘ಸೂಕ್ತ ಪರಿಹಾರ ಕೊಡಿ, ಇಲ್ಲ ಕಾಮಗಾರಿ ನಿಲ್ಲಿಸಿ’

ಎನ್‌.ಎಚ್– 206 ವಿಸ್ತರಣೆಗೆ ಭೂ ಸ್ವಾಧೀನ * ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುತ್ತಿಗೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:33 IST
Last Updated 13 ಮೇ 2019, 20:33 IST
ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಭೂ ಸಂತ್ರಸ್ತರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಭೂ ಸಂತ್ರಸ್ತರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಷ್ಟ್ರೀಯ ಹೆದ್ದಾರಿ– 206ರ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲ, ಕಾಮಗಾರಿಯನ್ನೇ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿ ಭೂ ಸಂತ್ರಸ್ತರು, ನಗರದಲ್ಲಿರುವರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ರೈತ- ಕೃಷಿ ಕಾರ್ಮಿಕ ಸಂಘಟನೆ’, ‘ಭೂ ಸಂತ್ರಸ್ತರ ಹೋರಾಟ ಸಮಿತಿ’ ಹಾಗೂ ‘ರಾಜ್ಯ ರೈತ ಸಂಘ’ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರು, ಹಾಸನ, ಚಿಕ್ಕಮಗಳೂರಿನಿಂದ ಬಂದಿದ್ದ ಸಂತ್ರಸ್ತರು, ನಾಗಸಂದ್ರ ಮೆಟ್ರೊ ನಿಲ್ದಾಣ ಬಳಿ ಇರುವ ಪ್ರಾಧಿಕಾರದ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅದನ್ನು ತಡೆದರು. ಪ್ರಾಧಿಕಾರದ ಕಚೇರಿ ಎದುರೇ ಕುಳಿತುಕೊಂಡು ಸಂತ್ರಸ್ತರು ಪ್ರತಿಭಟನೆ ಮುಂದುವರಿಸಿದರು.

ADVERTISEMENT

‘ಹೆದ್ದಾರಿ ವಿಸ್ತರಣೆ ಮಾಡುವ ಮೂಲಕ ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತರನ್ನು ಸರ್ಕಾರ ಬೀದಿಪಾಲು ಮಾಡಲು ಹೊರಟಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರವೂ ನಿಗದಿ ಮಾಡಿಲ್ಲ. ಆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹಾಗೂ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಕಡೂರಿನ ದೊಡ್ಡಘಟ್ಟ ಗ್ರಾಮದಲ್ಲಿ ಗುಂಟೆಗೆ ₹ 480 ಹಾಗೂ ತಿಪಟೂರಿನ ಗ್ರಾಮಗಳಲ್ಲಿ ಗುಂಟೆಗೆ ₹ 2 ಲಕ್ಷ ಪರಿಹಾರ ನಿಗದಿ ಮಾಡಲಾಗಿದೆ. ಈ ರೀತಿಯ ತಾರತಮ್ಯ ಏಕೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಮಾರುಕಟ್ಟೆ ದರ ಗಮನಿಸದ ಅಧಿಕಾರಿಗಳು, ತಮ್ಮಿಷ್ಟದಂತೆ ಬೇಕಾಬಿಟ್ಟಿಯಾಗಿ ದರ ನಿಗದಿ ಮಾಡಿದ್ದಾರೆ. ಮಧ್ಯವರ್ತಿಗಳನ್ನು ಇಟ್ಟುಕೊಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಹ ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪರಿಹಾರ ನಿಗದಿಯಲ್ಲಿ ಆಗಿರುವ ಅವ್ಯವಹಾರ, ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಯಾವುದೇ ತಾರತಮ್ಯ ಮಾಡದೇ ಪ್ರಸಕ್ತ ಮಾರುಕಟ್ಟೆ ದರಕ್ಕೆ ತಕ್ಕಂತೆ ಪರಿಹಾರ ನಿಗದಿ ಮಾಡಬೇಕು. ಅಲ್ಲಿಯವರೆಗೂ ನಮ್ಮ ಭೂಮಿಯನ್ನು ಕೊಡುವುದಿಲ್ಲ. ಕಾಮಗಾರಿ ನಡೆಸಲು ಸಹ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌.ಹಿರೇಮಠ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.