ಬೆಂಗಳೂರು: ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ನಿರ್ಮಿಸಿರುವ 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆಯನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸೌಮ್ಯನಾಥ ಸ್ವಾಮೀಜಿ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಭಕ್ತರೆಲ್ಲರೂ ಸೇರಿ ಈ ಪ್ರತಿಮೆ ಸ್ಥಾಪಿಸಿರುವುದು ಶ್ಲಾಘನೀಯ. ದೇಶದಲ್ಲಿ ರಾಮ ರಾಜ್ಯ ನಿರ್ಮಾಣವಾಗಬೇಕು. ರಾಮನ ಆಡಳಿತ, ಗುಣ, ಮನಸ್ಸು, ಪಿತೃವಾಕ್ಯ ಪರಿಪಾಲನೆ, ಕುಟುಂಬ ಸಂಬಂಧಗಳೆಲ್ಲವೂ ಅವಿಸ್ಮರಣೀಯ. ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರಿಗೂ ಶ್ರೀರಾಮಾಂಜನೇಯ ಪ್ರತಿಮೆ ಸ್ಪೂರ್ತಿಯಾಗಲಿ’ ಎಂದು ಹಾರೈಸಿದರು.
ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಶ್ರೀಧರ್, ಎಚ್.ಎಂ. ಕೃಷ್ಣಮೂರ್ತಿ, ಆರ್.ವಿ. ಹರೀಶ್, ಸಾವಿತ್ರಿ ಸುರೇಶ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ಮಂಜುನಾಥ್, ದೀಪಾ ನಾಗೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.