ADVERTISEMENT

ಪಶ್ಚಿಮದಲ್ಲಿ ಕಣಿವೆಗಳಿಗೇ ಮಣ್ಣು: ಖಾಸಗಿ ವ್ಯಕ್ತಿಗಳಿಂದ ಅತಿ ಹೆಚ್ಚು ಒತ್ತುವರಿ

Published 24 ಸೆಪ್ಟೆಂಬರ್ 2022, 3:05 IST
Last Updated 24 ಸೆಪ್ಟೆಂಬರ್ 2022, 3:05 IST
   

ಬೆಂಗಳೂರು: ನಗರದ ಪಶ್ಚಿಮ ವಲಯದಲ್ಲಿ ವೃಷಭಾವತಿ ಹಾಗೂ ಹೆಬ್ಬಾಳ ಕಣಿವೆಗಳನ್ನೇ ಅತಿಕ್ರಮಿಸಲಾಗಿದೆ. ದೇವಸ್ಥಾನಗಳಿಗಾಗಿ ಒತ್ತುವರಿಯೂ ಸಾಕಷ್ಟಿದೆ. ಖಾಸಗಿ ಒತ್ತುವರಿಗಳ ಜೊತೆಗೆ ಬಿಬಿಎಂಪಿ, ಬಿಡಿಎ ವತಿಯಿಂದ ರಸ್ತೆ ನಿರ್ಮಿಸಲಾಗಿದೆ. ಇದಕ್ಕಾಗಿ ಕಣಿವೆಯ ಮಾರ್ಗವನ್ನೇ ಬದಲಿಸಲಾಗಿದೆ. ಪಶ್ಚಿಮದಲ್ಲಿ ರಾಜಕಾಲುವೆಗಳಿಗೆ ಮಣ್ಣು ಸುರಿದು ಮುಚ್ಚಲಾಗುತ್ತಿದೆ.

ರಾಜಾಜಿನಗರ ರಾಮಮಂದಿರದಲ್ಲಿ ಕರಿಮಾರಿಯಮ್ಮ ದೇವಸ್ಥಾನ (101 ಚ.ಮೀ), ಪ್ರಕಾಶನಗರ ಕೇತಮಾರನಹಳ್ಳಿಯಲ್ಲಿ ಕೋದಂಡರಾಮ ದೇವಸ್ಥಾನ (890 ಚ.ಮೀ) ಗಾಂಧಿನಗರದಲ್ಲಿ ಅಂಗಾಲ ಪರಮೇಶ್ವರಿ ದೇವಸ್ಥಾನ (263 ಚ.ಮೀ) ವೃಷಭಾವತಿ ಕಣಿವೆಯನ್ನು ಒತ್ತುವರಿ ಮಾಡಿಕೊಂಡಿವೆ. ರಸ್ತೆಗಳ ನಿರ್ಮಾಣದಲ್ಲಿ ಅಧಿಕ ಪ್ರಮಾಣದಲ್ಲಿ ಹೆಬ್ಬಾಳ ಹಾಗೂ ವೃಷಭಾವತಿ ಕಣಿವೆಯನ್ನು ಈ ವಲಯದ ಎಲ್ಲ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಒತ್ತುವರಿ ಮಾಡಿಕೊಳ್ಳಲಾಗಿದೆ.

ಶಿವನಹಳ್ಳಿ ಕೆರೆಯನ್ನು ಮುಚ್ಚಿ, ನಂತರ ಕಾಲುವೆಗಳನ್ನೂ ಬೇಕಾದ್ದೆಲ್ಲ ಮಾಡಿರುವುದರಿಂದ ಬಸವೇಶ್ವರನಗರದ ಈ ಭಾಗದಲ್ಲಿ ಆಗಾಗ್ಗೆ ತೊಂದರೆ ಆಗುತ್ತಲಿರುತ್ತದೆ. ಮಹಾಕವಿ ಕುವೆಂಪು ರಸ್ತೆ, ಮೋದಿ ಆಸ್ಪತ್ರೆ ಸುತ್ತಮುತ್ತ ಕೂಡ ರಾಜಕಾಲುವೆ ಕಣ್ಮರೆಯಾಗಿವೆ. ಮಾಗಡಿ ರಸ್ತೆಗ ಹೊಂದಿಕೊಂಡಂತಿದ್ದ ಕಾಮಾಕ್ಷಿ ಪಾಳ್ಯ ಕೆರೆಯನ್ನು ಹುಡುಕಬೇಕಾದ ಸ್ಥಿತಿ ಇದೆ. ನಾಗರಬಾವಿ, ಮಾಲಗಾಲದಲ್ಲಿ ಸ್ಥಿತಿ ಭಿನ್ನವಾಗೇನೂ ಇಲ್ಲ. ತುಮಕೂರು ರಸ್ತೆಗೆ ಸೇರುವ ಸಿ.ವಿ. ರಾಮನ್ ರಸ್ತೆ ಇಕ್ಕೆಲಗಳಲ್ಲಿ ರಾಜಕಾಲುವೆ ಮುಚ್ಚಿಹೋಗಿದೆ.

ADVERTISEMENT

ರಾಜಕಾಲುವೆಗಳ ಜೊತೆಗೆ ಕಣಿವೆಗಳಿಗೂ ಮಣ್ಣು ಮುಚ್ಚಿರುವುದು ದೊಡ್ಡಮಳೆಯಾದಂತಹ ಸಂದರ್ಭದಲ್ಲಿ ಅನಾಹುತಕ್ಕೆ ಎಡೆಮಾಡಿಕೊಟ್ಟಂತೆ. ಮಳೆ ನೀರು ಸರಾಗವಾಗಿ ಹರಿಯಬೇಕೆಂದರೆ ಕಾಲುವೆಗಳು ಎಂದಿನ ಸ್ಥಿತಿಗೆ ಬರಬೇಕೆಂಬುದು ನಾಗರಿಕರ ಆಗ್ರಹ.

ಪಹರೆ ಹಾಕಿ ರಕ್ಷಿಸಬೇಕು..
ವೃಷಭಾವತಿ ಕಣಿವೆಯೂ ನಾಶ ಆಗುತ್ತಿದೆ. ಪಹರೆ ಹಾಕಿ ರಕ್ಷಣೆ ಆಗಬೇಕಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅನಾಹುತ ತಪ್ಪಿಸಬಹುದು. ಕಣಿವೆಗಳಿಗೆ ಗೋಡೆ ಕಟ್ಟಿದರೆ ನೆರೆ ಬಂದು ತಪ್ಪು ಒಪ್ಪು ನೋಡದೇ ಎಲ್ಲರ ಗೋರಿ ತಾನೇ ಕಟ್ಟುತ್ತದೆ. ದೂರ ಸಂವೇದಿ ತಂತ್ರ ಜ್ಞಾನದ ದತ್ತಾಂಶಗಳನ್ನು ಪಡೆದು ‘ಡಿಜಿಟಲ್ ಎವೇಷನ್ ಮಾಡೆಲ್’ ತಯಾರಿಸಲಾಗಿದೆ. ಇದು ಅಲ್ಲಿನ ಉಬ್ಬು ತಗ್ಗುಗಳ ಚಿತ್ರಣ ಕೊಟ್ಟಿದೆ. ಇದರ ಮೇಲೆ ಟೋಪೋ ಮ್ಯಾಪಿನ ಕೆರೆ ಕುಂಟೆ ಕಾಲುವೆಗಳನ್ನು ಹೊಂದಿಸಿ ನೋಡಿದಾಗ ನಮ್ಮ ಪೂರ್ವಿಕರು ಆಯಕಟ್ಟಿನ ಜಾಗಗಳಲ್ಲಿ ಕೆರೆ ಕುಂಟೆ ಕಟ್ಟಿಸಿದ್ದರು. ಕಾಲುವೆಗಳಿಂದ ಅನತಿ ದೂರದಲ್ಲಿ ಹೊಲ, ತೋಟ ಹೊಂದಿದ್ದರು. ಕರಾಬು ಎಂದರೆ ಸಣ್ಣ ಹಳ್ಳಗಳು ಬಹಳ ಮುಖ್ಯ ಎಂದು ಭಾವಿಸಿದ್ದರು. ಈ ಕಾಲದ ಬಫರ್ ಝೋನ್ ನಿರ್ಬಂಧ ತಾವೇ ಮಾಡಿಕೊಂಡಿದ್ದರು. ಈಗ ಮೇಲೆ ತೋರಿಸಿರುವಂತೆ ಹಳ್ಳಗಳು ನಾಶವಾಗಿವೆ. ಲೇಔಟ್‌ಗಳಿಗೆ ಅನುಮತಿ ಕೊಡುವಾಗ ಅವಾಂತರ ಆಗಿದೆ ಎನ್ನುತ್ತಾರೆ ಭೂವಿಜ್ಞಾನ ನಿವೃತ್ತ ಪ್ರಾಧ್ಯಾಪಕ ಮತ್ತು ಬೆಂಗಳೂರು ವಿವಿ ಜೈವಿಕ ವನ ಸಂಯೋಜಕರಾಗಿದ್ದಡಾ.ಟಿ ಜೆ. ರೇಣುಕಾ ಪ್ರಸಾದ್.

ಅರಣ್ಯ ಇಲಾಖೆಯಿಂದಲೇ ಸ್ಯಾಂಕಿ ಕೆರೆ ಒತ್ತುವರಿ
ಸದನ ಸಮಿತಿ ಸೂಚನೆಯಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರ 2015–16ರ ಆದೇಶದಂತೆ ಸ್ಯಾಂಕಿ ಕೆರೆ ವ್ಯಾಪ್ತಿಯ ಸರ್ವೆ ನಡೆಸಿ, ಅಳತೆ ಮಾಡಿ ನಕ್ಷೆ ತಯಾರಿಸಲಾಗಿದೆ. ಇದರಂತೆ, ಅರಣ್ಯ ಇಲಾಖೆಯವರು 37 ಗುಂಟೆ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿಕೊಂಡಿದ್ದಾರೆ.

‘ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಹೊಟ್ಟೆಪಾಡಿಗೆ ರೈತರು ಒಂದು ಅಡಿಯಷ್ಟು ಒತ್ತುವರಿ ಮಾಡಿಕೊಂಡರೂ ಅವರಿಗೆ ಅಧಿಕಾರಿಗಳು ನೀಡುವ ಕಿರುಕುಳ ಅಷ್ಟಿಷ್ಟಲ್ಲ. ಆದರೆ, ಐಷಾರಾಮಿ ಕಚೇರಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಹಾಗೂ ಅಭಿವೃದ್ಧಿಗಾಗಿ ಈಗಲೂ ಕೋಟ್ಯಂತರ ವೆಚ್ಚವಾಗುತ್ತಿರುವ ಸ್ಯಾಂಕಿ ಕೆರೆಯಲ್ಲಿ ಅರಣ್ಯ ಇಲಾಖೆಯೇ ಒತ್ತುವರಿ ಮಾಡಿಕೊಂಡಿದೆ. ಎಲ್ಲ ರೀತಿಯ ದಾಖಲೆಗಳಿಲ್ಲದಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ಪರಿಸರ ಕಾರ್ಯಕರ್ತ ಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಮೂರು ಕಾರು ಶೆಡ್‌, ಎರಡು ಕಚೇರಿ ಕ್ವಾರ್ಟರ್ಸ್ ಕೂಡ ನಿರ್ಮಿಸಿಕೊಂಡಿದ್ದು, ರಾಜಕಾಲುವೆಗಳ ಬಫರ್‌ಝೋನ್‌ ಅನ್ನೂ ಅರಣ್ಯ ಇಲಾಖೆಯವರು ಬಿಟ್ಟಿಲ್ಲ. ಇಷ್ಟೇ ಅಲ್ಲದೆ, ಈ ಭಾಗದ ಒಳಚರಂಡಿ ನೀರು ಕೂಡ ನೇರವಾಗಿ ಕೆರೆಗೇ ಸೇರಿಕೊಳ್ಳುತ್ತಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಇದು ಬಂದಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.