ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸ್ಥಳೀಯ ಯೋಜನಾ ಪ್ರಾಧಿಕಾರ ಸೇರಿದಂತೆ ಬೆಂಗಳೂರು ಮೆಟ್ರೊ ಪಾಲಿಟನ್ ವಲಯದಲ್ಲಿರುವ ಎಲ್ಲ ಯೋಜನಾ ಪ್ರಾಧಿಕಾರಗಳಲ್ಲಿ ರಾಜಕಾಲುವೆಗಳ ಬಫರ್ ವಲಯವನ್ನು ಅರ್ಧದಷ್ಟು ಕಡಿಮೆ ಮಾಡಿ ನಗರಾಭಿವೃದ್ಧಿ ಇಲಾಖೆ ಗುರುವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.
ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ವಲಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡುವಾಗ ಪರಿಗಣಿಸಬೇಕಾಗಿದೆ. ಇದಕ್ಕಾಗಿ, ಮಾಸ್ಟರ್ ಪ್ಲಾನ್‌ನಲ್ಲಿರುವ ಬಫರ್ ವಲಯ ವ್ಯಾಪ್ತಿಯನ್ನು ಬದಲಾಯಿಸಿ ವಲಯ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್ 13–ಇಗೆ ತಿದ್ದುಪಡಿ ತಂದು, ಬೆಂಗಳೂರಿನ ಸ್ಥಳೀಯ ಯೋಜನಾ ಪ್ರಾಧಿಕಾರದ ಪರಿಷ್ಕೃತ ಮಾಸ್ಟರ್ ಪ್ಲಾನ್–2015, ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಹಾಗೂ ಬೆಂಗಳೂರು ಮೆಟ್ರೊಪಾಲಿಟನ್ ವಲಯದ ಎಲ್ಲ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿ ವಲಯ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಸೆ.2ರಂದು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಕೆರೆಗಳ ಬಫರ್ ವಲಯವನ್ನು ಕಂದಾಯ ಇಲಾಖೆಯ ದಾಖಲೆಯಂತೆ ನಿರ್ವಹಣೆ ಮಾಡಬೇಕು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಲ್ಲಿ ಕೆರೆಗಳ ಬಫರ್ ವಲಯ ನಿಗದಿಯಾಗಿದೆ. ಕೆರೆಗಳ ಬಫರ್ ವಲಯವನ್ನು ‘ಮೀಸಲು ಉದ್ಯಾನ’ವನ್ನಾಗಿ ಪರಿಗಣಿಸಿ ನಕ್ಷೆ ಅನುಮೋದನೆ ನೀಡಬಹುದು ಎಂದು ಹೇಳಲಾಗಿದೆ.
ರಾಜಕಾಲುವೆಗಳಿಗೆ ಹೊಸ ವ್ಯಾಖ್ಯಾನ ನೀಡಿ, ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಯಿಂದ ಕೆರೆಗೆ ಅಥವಾ ಕೆರೆಯಿಂದ ನದಿಗೆ ಮಳೆನೀರು ಹರಿಸುವ ಕಾಲುವೆಗಳನ್ನು ಪ್ರಾಥಮಿಕ ರಾಜಕಾಲುವೆ ಎಂದು ಹೆಸರಿಸಲಾಗಿದೆ. ದ್ವಿತೀಯ ರಾಜಕಾಲುವೆ ಎಂದರೆ, ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಗಳಿಗೆ ಅಥವಾ ಪ್ರಾಥಮಿಕ ರಾಜಕಾಲುವೆಗೆ ಮಳೆ ನೀರನ್ನು ಹರಿಸುವ ಕಾಲುವೆಗಳು ಎಂದು ಹೇಳಲಾಗಿದೆ. ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ದ್ವಿತೀಯ ಹಂತದ ರಾಜಕಾಲುವೆಗೆ ಮಳೆ ನೀರು ಹರಿಸುವ ಕಾಲುವೆಗಳನ್ನು ತೃತೀಯ ರಾಜಕಾಲುವೆಗಳು ಎಂದು ವಿವರಿಸಲಾಗಿದೆ.
ಕೆರೆ ಹಾಗೂ ರಾಜಕಾಲುವೆಗಳ ಬಫರ್ ವಲಯ ಕಡಿಮೆ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಂತೆ, ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ರಾಜಕಾಲುವೆ ಬಫರ್ ವಲಯ ಕೆಟಿಸಿಡಿಎ ವ್ಯಾಪ್ತಿಗೆ ಬಾರದಿರುವುದರಿಂದ, ಸಮಿತಿಯ ತೀರ್ಮಾನದಂತೆ ಅಧಿಸೂಚನೆ ಹೊರಡಿಸಿ, ಕಡಿತಗೊಳಿಸಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರಲ್ಲಿ ಹೊರಡಿಸಿದ ಆದೇಶದಂತೆ, ಪ್ರಾಥಮಿಕ ರಾಜಕಾಲುವೆಗೆ 50 ಮೀಟರ್, ದ್ವಿತೀಯ ರಾಜಕಾಲುವೆಗೆ 35 ಮೀಟರ್, ತೃತೀಯ ರಾಜಕಾಲುವೆಗೆ 25 ಮೀಟರ್ ಬಫರ್ ವಲಯ ನಿಗದಿಯಾಗಿತ್ತು. ಸರ್ಕಾರದ 2019ರ ಆದೇಶದಂತೆ, ರಾಜಕಾಲುವೆಗಳ ಬಫರ್ ವಲಯವನ್ನು ಮತ್ತಷ್ಟು ಕಡಿತಗೊಳಿಸಿ ಜಾರಿಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.