ADVERTISEMENT

ಯುವ ಉದ್ಯಮಿಯ ಕನಸು ಛಿದ್ರಗೊಳಿಸಿದ ರಾಜಕಾಲುವೆ

ತನ್ನದಲ್ಲದ ತಪ್ಪಿಗೆ ₹40 ಲಕ್ಷ ನಷ್ಟದಲ್ಲಿ ಸಿಲುಕಿದ ಯುವಕ

ವಿಜಯಕುಮಾರ್ ಎಸ್.ಕೆ.
Published 23 ಅಕ್ಟೋಬರ್ 2019, 20:02 IST
Last Updated 23 ಅಕ್ಟೋಬರ್ 2019, 20:02 IST
ಹೊಲಿಗೆ ಯಂತ್ರಗಳನ್ನು ಕಳಚಿ ದುರಸ್ತಿಗೆ ಪ್ರಯತ್ನಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಇರ್ಷಾದ್‌ ಮಹಮ್ಮದ್‌
ಹೊಲಿಗೆ ಯಂತ್ರಗಳನ್ನು ಕಳಚಿ ದುರಸ್ತಿಗೆ ಪ್ರಯತ್ನಿಸುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಇರ್ಷಾದ್‌ ಮಹಮ್ಮದ್‌   

ಬೆಂಗಳೂರು: ವರ್ಷವಿಡೀ ಅನ್ನ ಕೊಡುವ 25 ಹೊಲಿಗೆ ಯಂತ್ರಗಳಿಗೆ ಆಯುಧ ಪೂಜೆ ಮಾಡಿ ಬಾಗಿಲು ಹಾಕಿಕೊಂಡು ಊರಿಗೆ ಹೋಗಿದ್ದೆವು. ವಾಪಸ್ ಬಂದು ನೋಡುವಷ್ಟರಲ್ಲಿ ಕೊಳಚೆ ನೀರಿನಲ್ಲಿ ಎಲ್ಲಾ ಯಂತ್ರಗಳು ಮುಳುಗಿದ್ದವು. ಇದರೊಂದಿಗೆ ಕಷ್ಟಪಟ್ಟು ಕಟ್ಟಿಕೊಂಡಿದ್ದ ಬದುಕೂ ಮುಳುಗಿ ಮೂರಾಬಟ್ಟೆಯಾಗಿ ಹೋಯಿತು...’

ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ (ಪಿಎಂಇಜಿಪಿ) ಸಾಲ ಪಡೆದು ಉದ್ದಿಮೆದಾರನಾಗುವ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿರುವ ತುಮಕೂರು ಜಿಲ್ಲೆ ಶಿರಾದ ಯುವಕ ಗುರುಲಿಂಗಪ್ಪ (ರಾಜು) ಹೀಗೆ ಹೇಳುವಾಗ ಕಣ್ಣಾಲಿಗಳು ತುಂಬಿಕೊಂಡವು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ ವಾರ್ಡ್‌ನ ಮಾರುತಿ ಬಡಾವಣೆಯಲ್ಲಿ ಎಂ.ಎಲ್.ಕ್ರಿಯೇಷನ್ ಎಂಬ ಹೆಸರಿನ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಗುರುಲಿಂಗಪ್ಪ ತೆರೆದಿದ್ದಾರೆ. ಇದರಲ್ಲಿ ಸುಮಾರು 8 ಲಕ್ಷ ಮೌಲ್ಯದ 23 ಸಾಮಾನ್ಯ ಹೊಲಿಗೆ ಯಂತ್ರಗಳು ಮತ್ತು ಬಟ್ಟೆಗಳಿಗೆ ವಿಶೇಷ ವಿನ್ಯಾಸ ನೀಡುವ ಸಲುವಾಗಿ ಎರಡು ತಿಂಗಳ ಹಿಂದಷ್ಟೇ ಖರೀದಿಸಿದ ₹15.40 ಲಕ್ಷ ಮೌಲ್ಯದ 3 ಹೈಟೆಕ್‌ ಹೊಲಿಗೆ ಯಂತ್ರಗಳೂ ಇವೆ.

ADVERTISEMENT

ದೊಡ್ಡ ದೊಡ್ಡ ಗಾರ್ಮೆಂಟ್‌ ಕಂಪನಿಗಳಿಂದ ಆರ್ಡರ್‌ಗಳನ್ನು ಪಡೆದು ಉಡುಪು ಸಿದ್ಧಪಡಿಸಿಕೊಡುವ ಗುರುಲಿಂಗಪ್ಪ, 25 ಜನರಿಗೆ ಕೆಲಸವನ್ನೂ ಕೊಟ್ಟಿದ್ದರು. ಆಯುಧಪೂಜೆಗೂ ಮುನ್ನ ಒಂದು ಸಾವಿರಕ್ಕೂ ಹೆಚ್ಚು ಜೀನ್ಸ್‌ ಪ್ಯಾಂಟ್‌ಗಳನ್ನು ಸಿದ್ಧಪಡಿಸಿಕೊಡಲು ಆರ್ಡರ್ ಪಡೆದಿದ್ದರು. ಬಟ್ಟೆ ತಂದು ಕಟ್ಟಿಂಗ್ ಕೆಲಸ ಮುಗಿಸಿಟ್ಟಿದ್ದರು. ಹೊಲೆದು ಕೊಡುವ ಕೆಲಸ ಬಾಕಿ ಇತ್ತು.

ಉದ್ಯಮಿಯಾಗಬೇಕೆಂಬ ಗುರುಲಿಂಗಪ್ಪ ಅವರ ಕನಸನ್ನು ಅಕ್ಟೋಬರ್ 9ರ ಮಧ್ಯರಾತ್ರಿ ಸುರಿದ ಮಳೆ ಛಿದ್ರಗೊಳಿಸಿದೆ. ಚೊಕ್ಕಸಂದ್ರ ಕೆರೆ ಕೋಡಿ ಒಡೆದು ಪ್ರವಾಹದಂತೆ ನುಗ್ಗಿದ ನೀರು ಅವರ ಬದುಕನ್ನೇ ತೊಳೆದಿದೆ.

ರಾಜಕಾಲುವೆಗೆ ವ್ಯಕ್ತಿಯೊಬ್ಬರು ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಅಕ್ಕಪಕ್ಕದ ಬಡಾವಣೆಗಳಿಗೆ ನೀರು ವ್ಯಾಪಿಸಿತು. ತಳಮಹಡಿಯಲ್ಲಿದ್ದ ಗುರುಲಿಂಗಪ್ಪ ಅವರ ಸಿದ್ಧ ಉಡುಪು ತಯಾರಿಕಾ ಘಟಕ ಈ ನೀರಿನಲ್ಲಿ ತುಂಬಿ ಹೋಯಿತು. ಹೊಲಿಗೆ ಯಂತ್ರಗಳೆಲ್ಲವೂ ಮುಳುಗಿದರೆ‌, ಹೊಲೆದುಕೊಡಲು ಸಿದ್ಧಪಡಿಸಿಟ್ಟಿದ್ದ ಬಟ್ಟೆಗಳು ತೇಲಾಡಿದವು.

ಆಯುಧ ಪೂಜೆ ಸಂಭ್ರಮದಲ್ಲಿ ಊರಿಗೆ ತೆರಳಿದ್ದ ಗುರುಲಿಂಗಪ್ಪ, ಮರುದಿನ ವಾಪಸ್ ಬಂದು ನೋಡುವಷ್ಟರಲ್ಲೇ ಬದುಕೇ ನೀರಿನಲ್ಲಿ ಮುಳುಗಿ ಹೋಗಿತ್ತು. ನೀರು ಖಾಲಿಯಾದ ಬಳಿಕ ಯಂತ್ರಗಳನ್ನು ದುರಸ್ತಿಪಡಿಸುವ ಪ್ರಯತ್ನದಲ್ಲಿದ್ದಾರೆ. ಕೆಲವು ಯಂತ್ರಗಳು ಸರಿಯಾಗುವ ನಿರೀಕ್ಷೆ ಇದ್ದು, ಇನ್ನೂ ಕೆಲವು ಗುಜರಿ ಅಂಗಡಿಯ ಪಾಲಾಗಲಿವೆ. ಒಂದು ಸಾವಿರ ಪ್ಯಾಂಟ್ ಸಿದ್ಧಪಡಿಸಲು ಕಟ್ಟಿಂಗ್ ಮಾಡಿಟ್ಟಿದ್ದ ಬಟ್ಟೆಗಳನ್ನು ತಿಪ್ಪೆಗೆ ಸುರಿಯಬೇಕಾಗಿದೆ.

ಗುರುಲಿಂಗಪ್ಪ ಜತೆಗೆ ಇಲ್ಲಿ ಕೆಲಸ ಮಾಡುತ್ತಿದ್ದ 25 ಮಂದಿಯ ಉದ್ಯೋಗಕ್ಕೂ ಕುತ್ತು ಬಂದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ‘ನನ್ನದಲ್ಲದ ತಪ್ಪಿನಿಂದ ನಾನು ಸುಮಾರು ₹40 ಲಕ್ಷದಷ್ಟು ನಷ್ಟ ಅನುಭವಿಸಿದ್ದೇನೆ. ತಡೆಗೋಡೆ ಇಲ್ಲದ ರಾಜಕಾಲುವೆ ನನ್ನ ಬದುಕನ್ನೇ ಕಸಿದುಕೊಂಡಿದೆ. ದಯವಿಟ್ಟು ಪರಿಹಾರ ಕೊಡಿಸಿ’ ಎಂದು ಅಂಗಲಾಚುತ್ತಿದ್ದಾರೆ.

ಪರಿಹಾರವೇ ಇಲ್ಲ!

ಮನೆಗಳಿಗೆ ನೀರು ನುಗ್ಗಿ ಆಗುವ ಹಾನಿಗೆ ಪರಿಹಾರ ನೀಡಲು ಬಿಬಿಎಂಪಿಯಲ್ಲಿ ಅವಕಾಶ ಇಲ್ಲ.

ಹಳೇ ನಿಯಮಗಳ ಪ್ರಕಾರ ಹೆಂಚಿನ ಮನೆ, ಶೀಟ್‌ ಮನೆಗಳು ಬಿದ್ದರೆ ₹2 ಸಾವಿರದಿಂದ ₹5 ಸಾವಿರದ ತನಕ ಪರಿಹಾರವಿದೆ. ಈ ಬಡಾವಣೆಯಲ್ಲಿ ಎಲ್ಲವೂ ಆರ್‌ಸಿಸಿ ಮನೆಗಳೇ ಇವೆ.

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ, ಪರಿಹಾರ ನೀಡಲು ಅವಕಾಶ ಇಲ್ಲ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

***

ಯಾರೋ ಮಾಡಿದ ತಪ್ಪಿನಿಂದ ನಾನು ಸಂಕಷ್ಟಕ್ಕೆ ಸಿಲುಕಿದ್ದೇನೆ. ಯಾರ ಬಳಿ ಕಷ್ಟ ಹೇಳಿಕೊಳ್ಳುವುದೊ ಗೊತ್ತಾಗುತ್ತಿಲ್ಲ. ಸರ್ಕಾರವೇ ನನ್ನ ಬದುಕು ಕಟ್ಟಿಕೊಡಬೇಕು

–ಗುರುಲಿಂಗಪ್ಪ, ಯುವ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.