ADVERTISEMENT

ಮಳೆಯಾದರೆ ಹೆಮ್ಮಿಗೆಪುರ ವಾರ್ಡ್‌ ಜನರಿಗೆ ಭೀತಿ!

ಮನೆಗಳಿಗೆ ನುಗ್ಗುವ ರಾಜಕಾಲುವೆ ನೀರು: ಕೃಷಿ ಭೂಮಿಗಳಿಗೂ ಹಾನಿ; ದುರ್ನಾತದ ನಡುವೆಯೇ ದಿನ ದೂಡುತ್ತಿರುವ ಜನ

ಜಿ.ಶಿವಕುಮಾರ
Published 21 ಜುಲೈ 2021, 19:46 IST
Last Updated 21 ಜುಲೈ 2021, 19:46 IST
ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ ಸನಿಹದ ಕೃಷಿ ಭೂಮಿಯ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ–ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.
ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ ಸನಿಹದ ಕೃಷಿ ಭೂಮಿಯ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ–ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.   

ಬೆಂಗಳೂರು: ಮಹಾನಗರಿಯಲ್ಲಿ ಮಳೆ ಸುರಿದರೆ ನಗರದಿಂದ 18 ಕಿ.ಮೀ.ದೂರದಲ್ಲಿರುವ ಈ ಬಡಾವಣೆ ಜನರಲ್ಲಿ ಭೀತಿ ಶುರುವಾಗುತ್ತದೆ. ಉಕ್ಕಿ ಹರಿವ ವೃಷಭಾವತಿ ರಾಜಕಾಲುವೆ ಇವರ ನೆಮ್ಮದಿ ಕಸಿದುಕೊಳ್ಳುತ್ತದೆ. ಮನೆಯಿಂದ ಅನತಿ ದೂರದಲ್ಲೇ ಇರುವ ಕಾಲುವೆಯಲ್ಲಿ ಒಮ್ಮೊಮ್ಮೆ ಹೆಣಗಳೂ ತೇಲಿ ಹೋಗುತ್ತವೆ. ವಿಷ ಜಂತುಗಳು ಮನೆಯಂಗಳದಲ್ಲೇ ಬೀಡು ಬಿಡುತ್ತವೆ. ಕೆಲವೊಮ್ಮೆ ಮನೆಯೊಳಗೂ ಬರುವುದುಂಟು...

ಇದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ 198ರ ನಿವಾಸಿಗಳ ವ್ಯಥೆ.

ಕೆಂಗೇರಿಯಿಂದ ಉತ್ತರಹಳ್ಳಿಗೆ ಸಾಗುವ ಮಾರ್ಗ ಮಧ್ಯದಲ್ಲಿ ರಾಜಕಾಲುವೆ ಹಾದುಹೋಗುತ್ತದೆ. ಇದಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದ್ದು ಈ ಸೇತುವೆ ತಟದಲ್ಲಿ ಬರುವ ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ, ವಿದ್ಯಾಪೀಠ ರಸ್ತೆ ಹಾಗೂ ವಿನಾಯಕನಗರ ನಿವಾಸಿಗಳು ಈಗಲೂ ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಭಯದಲ್ಲೇ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ADVERTISEMENT

ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಕೆಲವೆಡೆ ಸೇತುವೆ ನಿರ್ಮಿಸಲಾಗಿದೆ. ಅಂತಹ ಜಾಗದಲ್ಲಿ ಕಾಲುವೆಯ ಎರಡು ಬದಿಯಲ್ಲೂ ಸುಸಜ್ಜಿತ ತಡೆಗೋಡೆಗಳಿವೆ. ಕೆಲವೆಡೆ ಸ್ಥಳೀಯರ ಒತ್ತಡಕ್ಕೆ ಮಣಿದು ಒಂದು ಬದಿಯಲ್ಲಷ್ಟೇ ತಡೆಗೋಡೆ ಕಟ್ಟಲಾಗಿದೆ. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕಾಲುವೆಯಲ್ಲಿ ವಿಪರೀತ ಹೂಳು ತುಂಬಿಕೊಂಡಿರುವುದರಿಂದ ನೀರು ತಡೆಗೋಡೆಯ ಮೇಲಿಂದ ಉಕ್ಕಿ ಹರಿದು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಗೋಡೆ ಎತ್ತರಿಸುವಂತೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರೂ ಯಾರೂ ಸ್ಪಂದಿಸಿಲ್ಲ. ತ್ಯಾಜ್ಯ ಮಿಶ್ರಿತ ನೀರು ಮನೆಯ ಮುಂದೆ ನಿಲ್ಲುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡಿದಂತಾಗಿದೆ.

‘ವರ್ಷವಿಡೀ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದೇವೆ. ರಾಜಕಾಲುವೆ ತುಂಬಿ ಹರಿಯುವಾಗ ಶೌಚಾಲಯದಲ್ಲಿ ನೀರು ಕಟ್ಟಿಕೊಳ್ಳುತ್ತದೆ. ಸುತ್ತಮುತ್ತಲ ಪ್ರದೇಶದಲ್ಲಿ ಸರಿಯಾಗಿ ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮಳೆ ನೀರು ಮನೆಯೊಳಗೆ ನುಗ್ಗುತ್ತದೆ. ಕೊಳಚೆ ನೀರು ಸಂಪ್‌ಗೂ ಸೇರುವುದರಿಂದ ಕೆಲವೊಮ್ಮೆ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಇವೆಲ್ಲವನ್ನೂ ಸಹಿಸಿಕೊಂಡು ಬದುಕುವುದು ಅನಿವಾರ್ಯವಾಗಿದೆ’ ಎಂದು ಕೆಂಗೇರಿ ಕೋಟೆ ಬೀದಿಯ ಲಲಿತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಜೋರು ಮಳೆಯಾದರೆ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರು ನಿದ್ದೆಗೆಡಬೇಕಾಗುತ್ತದೆ. ಕೆಲವೆಡೆ ರಸ್ತೆಗಳೂ ಕೆಸರುಗದ್ದೆಯಂತಾಗುತ್ತವೆ. ರಾತ್ರಿ ಹೊತ್ತಿನಲ್ಲಿ ಕಾರ್ಖಾನೆಗಳ ತ್ಯಾಜ್ಯವನ್ನು ರಾಜಕಾಲುವೆಗೆ ಬಿಡಲಾಗುತ್ತದೆ. ಆ ದುರ್ನಾತ ಸಹಿಸಿಕೊಳ್ಳುವುದು ಅಸಾಧ್ಯ. ಗಬ್ಬು ವಾಸನೆಯಿಂದಾಗಿ ಊಟ ಮಾಡುವುದಕ್ಕೂ ಆಗುವುದಿಲ್ಲ. ಉಸಿರಾಡುವಾಗ ಗಂಟಲು ಕಟ್ಟಿಕೊಂಡಂತಾಗುತ್ತದೆ. ಎಳೆಯ ಮಕ್ಕಳ ಮೇಲೆ ಇದರಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಅವರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಕೃಷಿ ಭೂಮಿಗೂ ಹಾನಿ

ರಾಜಕಾಲುವೆ ಉಕ್ಕಿ ಹರಿವ ರಭಸಕ್ಕೆ ಕೃಷಿ ಭೂಮಿಯೊಳಗೆ ತ್ಯಾಜ್ಯ ಶೇಖರಣೆಯಾಗುತ್ತದೆ. ಕೆಲವು ಕಡೆ ತಡೆಗೋಡೆ ಇಲ್ಲದಿರುವುದರಿಂದ ಭೂ ಕುಸಿತವೂ ಆಗುತ್ತಿದೆ. ಇರುವ ಅಲ್ಪ ಸ್ವಲ್ಪ ಜಮೀನು ಕೊಚ್ಚಿ ಹೋಗುತ್ತಿರುವುದರಿಂದ ಸಣ್ಣ ಹಿಡುವಳಿದಾರ ರೈತರು ಕಂಗಾಲಾಗಿದ್ದಾರೆ.

‘ಇರುವ ಸ್ವಲ್ಪ ಜಮೀನಿನಲ್ಲಿ ಮಿಶ್ರ ಬೇಸಾಯ ಮಾಡುತ್ತಿದ್ದೇವೆ. ಸಪೋಟ, ಬಾಳೆ, ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಮಳೆಗಾಲದಲ್ಲಿ ಕಾಲುವೆಯ ನೀರು ಜಮೀನಿನ ಮೇಲೆ ಹರಿಯುತ್ತದೆ. ನೀರು ತಗ್ಗಿದ ಬಳಿಕ ರಾಶಿ ರಾಶಿ ಕಸ ಉಳಿದುಕೊಂಡಿರುತ್ತದೆ. ಅದನ್ನೆಲ್ಲಾ ತೆಗೆಸುವುದಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಅದಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ’ ಎಂದು ಯಜಮಾನಪ್ಪ ತೋಟದ ಮುನಿರಾಜು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.