ADVERTISEMENT

ಆರೋಗ್ಯ ವಿಶ್ವವಿದ್ಯಾಲಯಕ್ಕೆ ಐಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 20:15 IST
Last Updated 25 ಜನವರಿ 2019, 20:15 IST

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2013–14 ರಿಂದ 2016–17 ರ ಅವಧಿಗೆ ₹177 ಕೋಟಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ.

ತೆರಿಗೆ ಪಾವತಿಸದೇ ಇದ್ದರೆ ವಿಶ್ವವಿದ್ಯಾಲಯ ಹೊಂದಿರುವ ₹1000 ಕೋಟಿ ಖಾತೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾಲಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯವನ್ನು ಆದಾಯ ತೆರಿಗೆ ಕಾಯ್ದೆ 12(ಎ) ಅಡಿ ನೋಂದಣಿ ಮಾಡಿಸಲಾಗಿದೆ ಎಂಬುದು ವಿಶ್ವವಿದ್ಯಾಲಯದ ಅಧಿಕಾರಿಗಳ ವಾದ. ಆದರೆ, ಈ ರೀತಿ ಇಟ್ಟಿರುವ ಹಣಕ್ಕೆ ವಿಶ್ವವಿದ್ಯಾಲಯ ಬಡ್ಡಿಯನ್ನು ಪಡೆಯುತ್ತಿದೆ. ಆದ್ದರಿಂದ ತೆರಿಗೆಯನ್ನು ಪಾವತಿಸಬೇಕು ಎಂಬುದು ಆದಾಯ ತೆರಿಗೆ ಇಲಾಖೆಯ ಪ್ರತಿವಾದ.

ADVERTISEMENT

ವಿಶ್ವವಿದ್ಯಾಲಯವು 2012–13 ರವರೆಗೆ ಈ ಹಣಕ್ಕೆ ಬಡ್ಡಿ ಪಡೆಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸಬೇಕು ಎಂದು ನೋಟಿಸು ನೀಡಿದ್ದು, ನೋಟಿಸ್ ಪ್ರತಿ ಬುಧವಾರ ವಿಶ್ವವಿದ್ಯಾಲಯಕ್ಕೆ ತಲುಪಿದೆ. ಈ ವಿಷಯವನ್ನು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಜೋಹ್ರಾ ಜಬೀನ್‌ ಖಚಿತಪಡಿಸಿದ್ದಾರೆ.

ಮಾನ್ಯತೆ ನವೀಕರಣ ಇಲ್ಲ: ನಕಲಿ ಅಂಕಪಟ್ಟಿ ವಿತರಿಸಿರುವುದು ಸಾಬೀತಾಗಿರುವುದರಿಂದ ಏಳು ನರ್ಸಿಂಗ್‌ ಮತ್ತು ಇತರ ಕಾಲೇಜುಗಳ ಮಾನ್ಯತೆ ನವೀಕರಿಸಿಲ್ಲ ಎಂದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಚ್ಚಿದಾನಂದ ತಿಳಿಸಿದರು.

ಬೆಂಗಳೂರಿನ ಬೆಥೆಲ್‌ ಮೆಡಿಕಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸಸ್‌, ಹಾಸ್ಮಟ್‌ ಕಾಲೇಜ್ ಆಫ್‌ ನರ್ಸಿಂಗ್‌, ಗಾಯತ್ರಿ ದೇವಿ ಕಾಲೇಜ್‌ ಆಫ್‌ ನರ್ಸಿಂಗ್‌, ಪ್ಯಾನ್‌ ಏಷಿಯಾ ಕಾಲೇಜ್‌ ಆಫ್‌ ನರ್ಸಿಂಗ್‌, ಬೆಥೆಲ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ, ಹಾಸ್ಮಟ್‌ ಕಾಲೇಜ್‌ ಆಫ್‌ ಫಿಸಿಯೊ ಥೆರಪಿ, ಹಾಸ್ಮಟ್‌ ಹಾಸ್ಪಿಟಲ್‌ ಅಂಡ್‌ ಎಜುಕೇಷನಲ್‌ ಇನ್ಸ್‌ಟಿಟ್ಯೂಟ್‌ ಮಾನ್ಯತೆ ನವೀಕರಣಗೊಳ್ಳದ ಸಂಸ್ಥೆಗಳು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.