ADVERTISEMENT

ರಾಮಮಂದಿರ ನಿರ್ಮಾಣ: ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:29 IST
Last Updated 30 ಜನವರಿ 2021, 19:29 IST
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಡಿ.ವಿ. ಸದಾನಂದಗೌಡ. ಬಿಜೆಪಿ ಮುಖಂಡರು ಜತೆಗಿದ್ದರು
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಡಿ.ವಿ. ಸದಾನಂದಗೌಡ. ಬಿಜೆಪಿ ಮುಖಂಡರು ಜತೆಗಿದ್ದರು   

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿಧಿ ಸಂಗ್ರಹಿಸುವ ಅಭಿಯಾನಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು.

‘ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ಅಯೋಧ್ಯೆ ಆಂದೋಲನವು ಸಮಾಜದಲ್ಲಿ ಒಗ್ಗಟ್ಟು, ಸಾಮರಸ್ಯ ಮೂಡಿಸಿತು. ದೇಶಭಕ್ತಿಯನ್ನು ಜಾಗೃತಗೊಳಿಸಿತು. ದೇಶದಲ್ಲಿ ಹಲವು ಪ್ರಾಂತ, ವರ್ಗ, ಭಾಷೆ, ಆಚಾರ- ವಿಚಾರಗಳು ಇವೆ. ಆದರೂ ಏಕತೆ ಸಾಧಿಸುವ ಶಕ್ತಿ ಅಯೋಧ್ಯೆ ಶ್ರೀರಾಮಚಂದ್ರನಿಗಿದೆ’ ಎಂದು ಸದಾನಂದ ಗೌಡ ಹೇಳಿದರು.

‘ಸರ್ಕಾರವು ಸಂವಿಧಾನದ 370ನೇ ಪರಿಚ್ಚೇದವನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ದೇಶದಲ್ಲಿ ಎಲ್ಲ ರೀತಿಯಿಂದಲೂ ಐಕ್ಯಗೊಳಿಸುವ ಕೆಲಸಮಾಡಿದೆ’ ಎಂದರು.

ADVERTISEMENT

ನಿಧಿ ಸಂಗ್ರಹ ಅಭಿಯಾನಕ್ಕೆ ಮಾರ್ಗದರ್ಶನ ಮಾಡಿದ ಸಂಘದ ಹಿರಿಯರಾದ ಶ್ರೀಧರ್, ‘ಸಂಘ ಪರಿವಾರದ ಕಾರ್ಯಕರ್ತರು ಪ್ರತಿಯೊಂದು ವಾರ್ಡಿನ ಪ್ರತಿಯೊಬ್ಬರ ಮನೆಗೂ ತೆರಳಿ ಮಂದಿರ ನಿರ್ಮಾಣದ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು. ಜನಸಾಮಾನ್ಯರು ಎಷ್ಟೇ ಸಣ್ಣ ಮೊತ್ತ ನೀಡಿದರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಬೇಕು. ಈ ಮಹತ್ಕಾರ್ಯದಲ್ಲಿ ತಮ್ಮದೂ ಪಾಲಿದೆ ಎಂಬ ಅಭಿಮಾನ ಅವರಲ್ಲಿ ಉಂಟಾಗುವುದು ಮುಖ್ಯ' ಎಂದರು.

ಸಚಿವ ಕೆ. ಗೋಪಾಲಯ್ಯ, ಶಾಸಕ ಸಂಜೀವ್ ಮಠಂದೂರು, ವೈ.ಎನ್. ನಾರಾಯಣಸ್ವಾಮಿ, ಪ್ರತಾಪಸಿಂಹ ನಾಯಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ನಾರಾಯಣ, ಎಸ್. ಹರೀಶ್, ನೆ.ಲ. ನರೇಂದ್ರ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.