ADVERTISEMENT

ಬೆಂಗಳೂರು ನಗರದೆಲ್ಲಡೆ ರಾಮನವಮಿ ಸಂಭ್ರಮ

ಬೀದಿ ಬೀದಿಗಳಲ್ಲಿ ಪಾನಕ, ಕೋಸಂಬರಿ, ಉಪಾಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 20:45 IST
Last Updated 17 ಏಪ್ರಿಲ್ 2024, 20:45 IST
ನಗರದ ಬ್ಯಾಟರಾಯನಪುರ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಅಂಗವಾಗಿ ನಡೆದ ಶ್ರೀರಾಮ ವೇಣುಗೋಪಾಲ ಕೃಷ್ಣ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ನಗರದ ಬ್ಯಾಟರಾಯನಪುರ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಅಂಗವಾಗಿ ನಡೆದ ಶ್ರೀರಾಮ ವೇಣುಗೋಪಾಲ ಕೃಷ್ಣ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದೊಂದಿಗೆ ನಗರದಾದ್ಯಂತ ಶ್ರೀರಾಮನವಮಿಯನ್ನು ಬುಧವಾರ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆದವು.

ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಭಕ್ತರು ಬೆಳಗಿನಿಂದಲೇ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದರು. 

ನಗರದ ಹಲವೆಡೆ ವಿವಿಧ ಸಂಘಟನೆಗಳು ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ, ಮೊಸರನ್ನ, ಪಲಾವು ವಿತರಿಸಿದವು. ಕೆಲವು ಕಡೆ ಸಂಘ – ಸಂಸ್ಥೆಗಳು ಆಯೋಜಿಸಿದ್ದ ಶ್ರೀರಾಮನ ಶೋಭಾಯಾತ್ರೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಮೆರವಣಿಗೆಯಲ್ಲಿ ಭಕ್ತರು ರಾಮನಾಮ ಸಂಕೀರ್ತನೆ, ಭಜನೆ ಮಾಡಿದರು.

ADVERTISEMENT

ಮಲ್ಲೇಶ್ವರದ ಕೋದಂಡರಾಮಪುರದ ಕೋದಂಡರಾಮ ಭಜನಾ ಮಂದಿರ, ಯಶವಂತಪುರ ವೃತ್ತದಲ್ಲಿರುವ ದಾರಿ ಆಂಜನೇಯಸ್ವಾಮಿ ದೇವಸ್ಥಾನ, ರಂಗನಾಥಪುರದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಶ್ವತ್ಥನಗರದಲ್ಲಿರುವ ಆಂಜನೇಯ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆಯ ಆಂಜನೇಯ ದೇವಸ್ಥಾನ, ರಾಗಿಗುಡ್ಡದ ಆಂಜನೇಯ ದೇವಾಲಯ, ರಾಜಾಜಿನಗರದ ಶ್ರೀರಾಮಮಂದಿರ, ಗಾಂಧಿನಗರದ ಶ್ರೀರಾಮ ದೇವಸ್ಥಾನ, ಸಂಪಂಗಿ ರಾಮಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಆಂಜನೇಯ ಹಾಗೂ ರಾಮ ದೇವಾಲಯಗಳಲ್ಲಿ, ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 

ಮೈಸೂರು ರಸ್ತೆ : ನಗರದ ಬ್ಯಾಟರಾಯನಪುರ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ವೇಣುಗೋಪಾಲ ಕೃಷ್ಣ ಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು. ಭಕ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮಂಜುನಾಥ ನಗರ ಮಹಾಗಣಪತಿ ದೇವಾಲಯ ಸೇರಿದಂತೆ ಬೇರೆ ದೇವರ ದೇಗುಲಗಳಲ್ಲಿಯೂ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವು ದೇಗುಲಗಳಲ್ಲಿ ಸಂಗೀತೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಾಗದೇವನಹಳ್ಳಿ: ನಾಗದೇವನಹಳ್ಳಿಯ ಮಳರ ಸಿದ್ದೇಶ್ವರ ಪ್ರಾವಿಜನ್‌ ಸ್ಟೋರ್‌ ಬಳಿ ಶ್ರೀರಾಮನವಮಿಯನ್ನು ನೂರಾರು ಭಕ್ತರು ಸೇರಿ ಸಡಗರದಿಂದ ನಡೆಸಿದರು.

ವಿಶೇಷ ಪೂಜೆ, ಧ್ಯಾನ, ರಾಮನಾಮ ಸ್ಮರಣೆ ನಡೆಯಿತು. ಭಕ್ತರಿಗೆ ಮಜ್ಜಿಗೆ, ಬೆಲ್ಲದ ಪಾನಕ, ಕೊಸಂಬರಿ, ಸಿಹಿ ಹಂಚಲಾಯಿತು. ಮುಖಂಡರಾದ ಎನ್.ಸಿ. ಕುಮಾರ್‌, ಮಹಾಲಿಂಗೇಗೌಡ, ಚನ್ನಬಸವಾರಾಧ್ಯ, ಕುಮಾರಸ್ವಾಮಿ, ಬಿ.ಜಿ. ಭಟ್‌ ಭಾಗವಹಿಸಿದ್ದರು.

ದಾಬಸ್ ಪೇಟೆ: ಶ್ರೀರಾಮ ನವಮಿ ಹಬ್ಬದ ಅಂಗವಾಗಿ ಸೋಂಪುರ ಹೋಬಳಿಯ ನರಸೀಪುರದ ಆತ್ಮಾರಾಮ ಸ್ವಾಮಿ, ರಾಮದೇವರ ಹಾಗೂ ಹೆಗ್ಗುಂದ ಬೆಟ್ಟಗಳ ರಾಮದೇವರ ಪಾದುಕೆ ಬೆಟ್ಟ, ಅಗಲಕುಪ್ಪೆಯ ಕುಮಟರಾಮ ಸ್ವಾಮಿ, ಚನ್ನೋಹಳ್ಳಿ, ಹಾಲೇನಹಳ್ಳಿ, ಕೆರೆಪಾಳ್ಯ, ಇಮಚೇನಹಳ್ಳಿ, ಹೆಗ್ಗುಂದ, ಕುರುವೆಲ್ ತಿಮ್ಮನಹಳ್ಳಿ ಗ್ರಾಮಗಳ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯಗಳನ್ನು ತಳಿರುತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗಿನಿಂದ ದೇವಾಲಯಗಳಲ್ಲಿ ಮೂಲ ದೇವರಿಗೆ ಅಭಿಷೇಕ ಹಾಗೂ ಇತರ ಪೂಜಾ ಕಾರ್ಯಕ್ರಮ ನಡೆದವು. ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

––

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ಎಸ್.ಕೆ. ಕಾರ‍್ಸ್‌ ಮಾಲೀಕ ಮಹಮ್ಮದ್ ಸಲೀಂ ಅಹಮ್ಮದ್ ಹಾಗೂ ಸೋಮಶೇಖರ್ ನೇತೃತ್ವದಲ್ಲಿ ಶ್ರೀರಾಮನವಮಿ ಹಬ್ಬವನ್ನು ಆಚರಿಸಲಾಯಿತು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಭಾಗವಹಿಸಿದ್ದರು. ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಯನ್ನು ಭಕ್ತರಿಗೆ ವಿತರಿಸಲಾಯಿತು.

ಗ್ಲೋರಿಯಾ ಎಲಿಜಬೆತ್, ಹರೀಶ್ ಪಾರ್ಥ, ಬಿ.ಎಂ. ಜಗದೀಶ್, ಸೋಮಶೇಖರ್, ಅಮ್ಜದ್ ಖಾನ್, ನಯಾಜ್ ಪಾಷಾ, ಮೊಹಮ್ಮದ್ ಸಿದ್ದಿಕ್, ಪುಷ್ಪಲತಾ, ಅಶ್ವತ್ಥಾಮ್ಮ, ಜಯಶ್ರೀ, ಲಲಿತಮ್ಮ ಭಾಗವಹಿಸಿದ್ದರು.

ಬಸವೇಶ್ವರನಗರದ ಮಹಾಗಣಪತಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಆಂಜನೇಯ ಸ್ವಾಮಿಗೆ ರಾಮನ ವಿಶೇಷ ಅಲಂಕಾರ ಮಾಡಲಾಯಿತು –ಪ್ರಜಾವಾಣಿ ಚಿತ್ರ
ನಗರದ ಭಗವಾನ್‌ ಮಾರುತಿ ದೇವಾಲಯದಲ್ಲಿ ಬುಧವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ
ಶೇಷಾದ್ರಿಪುರದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿಗ್ರಹವನ್ನು ವಿಶೇಷ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಗುಡ್ಡದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಭಕ್ತರಿಗೆ ನೀರುಮಜ್ಜಿಗೆ ಪಾನಕ ವಿತರಿಸಲಾಯಿತು. ಪ್ರಜಾವಾಣಿ ಚಿತ್ರ
ವಸಂತನಗರ ಸಂಪಂಗಿ ರಾಮಸ್ವಾಮಿ ದೇವಸ್ಥಾನದಲ್ಲಿ ರಾಮ ಸೀತಾ ಲಕ್ಷ್ಮಣ ಆಂಜನೇಯ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಗುಡ್ಡದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ವಿಶೇಷ ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆ ಮಾಡಲಾಯಿತು. ಪ್ರಜಾವಾಣಿ ಚಿತ್ರ
ನಾಗದೇವನಹಳ್ಳಿಯ ಮಳರ ಸಿದ್ದೇಶ್ವರ ಪ್ರಾವಿಜನ್‌ ಸ್ಟೋರ್‌ ಬಳಿ ಶ್ರೀರಾಮನವಮಿ ಆಚರಿಸಲಾಯಿತು
ಬನಶಂಕರಿ ದ್ವಾರಕನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಶ್ರೀರಾಮನವಮಿಯನ್ನು ಶ್ರದ್ಧೆಯಿಂದ ಆಚರಿಸಲಾಯಿತು
ರಾಜಾಜಿನಗರದ 4ನೇ ಬ್ಲಾಕ್‌ನ ರಾಮಮಂದಿರದಲ್ಲಿ ಬುಧವಾರ ರಾಮನವಮಿ ಅಂಗವಾಗಿ ಬಾಲರಾಮನ ತೊಟ್ಟಿಲನ್ನು ಭಕ್ತರು ತೂಗಿದರು. ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.