
ಡಸಾಲ್ಟ್ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ರಾಮಕೃಷ್ಣನ್ ವೆಂಕಟರಾಮನ್ ಹಾಗೂ ವಿಶ್ವವಿದ್ಯಾಲಯದ ಕುಲಸಚಿವ ಜಿ.ಎಸ್. ವೆಂಕಟೇಶ್ ಒಡಂಬಡಿಕೆ ಮಾಡಿಕೊಂಡರು. ಎಂ.ಆರ್. ಜಯರಾಮ್ ಉಪಸ್ಥಿತರಿದ್ದರು
ಬೆಂಗಳೂರು: ಅತ್ಯಾಧುನಿಕ ಉತ್ಪನ್ನಗಳ ಅಭಿವೃದ್ಧಿ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ನಾವಿನ್ಯತಾ ಕೇಂದ್ರ ಪ್ರಾರಂಭಿಸಲು ಅಮೆರಿಕದ ಡಸಾಲ್ಟ್ ಸಿಸ್ಟಮ್ಸ್ ಹಾಗೂ ಇಲ್ಲಿನ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ.
‘3ಡಿ ಡಿಸೈನ್, ಎಂಜಿನಿಯರಿಂಗ್ ಹಾಗೂ ಸಿಮ್ಯುಲೇಷನ್ ತಂತ್ರಜ್ಞಾನದಲ್ಲಿ ಡಸಾಲ್ಟ್ ಸಿಸ್ಟಮ್ಸ್ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ‘ಅಪ್ಲಿಕೇಷನ್’ ಆಧಾರಿತ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಆದ್ದರಿಂದ ಸಂಶೋಧನಾ ಕ್ಷೇತ್ರದಲ್ಲಿ ಈ ಒಡಂಬಡಿಕೆ ಮಹತ್ವದಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೋಕುಲ ಎಜುಕೇಷನ್ ಫೌಂಡೇಷನ್ (ವೈದ್ಯಕೀಯ) ಅಧ್ಯಕ್ಷ ಎಂ.ಆರ್. ಜಯರಾಮ್ ತಿಳಿಸಿದ್ದಾರೆ.
‘ವಿಶ್ವವಿದ್ಯಾಲಯದ ಆವರಣದಲ್ಲಿ ನಾವಿನ್ಯತಾ ಕೇಂದ್ರ ಪ್ರಾರಂಭಿಸಲಾಗುತ್ತದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಈ ಕೇಂದ್ರ ಸಹಕಾರಿಯಾಗಲಿದೆ. ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದು, ಸಂಶೋಧನೆಗಳು ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳನ್ನು ಕೇಂದ್ರೀಕರಿಸಲಿದೆ’ ಎಂದಿದ್ದಾರೆ.
ವಿ.ವಿ ಕುಲಪತಿ ಕೆ.ಕೆ. ರೈನಾ, ‘ಉದ್ಯಮಕ್ಕೆ ಬೇಕಾದ ಕೌಶಲಗಳನ್ನು ವೃದ್ಧಿಸಲು, ಪರಿಣಾಮಕಾರಿ ಶಂಶೋಧನೆ ನಡೆಸಲು ಈ ಒಡಂಬಡಿಕೆ ಸಹಕಾರಿ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.