
ಬೆಂಗಳೂರು: ದಿನ ಬೆಳಗಾದರೆ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸುವುದನ್ನು ಬಿಟ್ಟು ನಾಡಿನ ಅಭಿವೃದ್ಧಿಯ ಕಡೆ ಗಮನ ಹರಿಸುವುದು ಎಲ್ಲರ ಕರ್ತವ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು ವರದಿಗಾರರ ಕೂಟ ಹೊರತಂದಿರುವ ಸುವರ್ಣ ಮಹೋತ್ಸವದ ದಿನಚರಿಯನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಲವು ತಿಂಗಳಿನಿಂದ ರಾಜ್ಯದಲ್ಲಿ ಬರೀ ನಾಯಕತ್ವದ ಕುರಿತು ಚರ್ಚೆ ನಡೆಯುತ್ತಿದೆ. ನಾಯಕತ್ವದ ವಿಚಾರವನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೀಗಾಗಿ ನಾಯಕತ್ವದ ಬದಲಾವಣೆ ಎಂಬುದು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು’ ಎಂದು ಅಭಿಪ್ರಾಯಪಟ್ಟರು.
ವ್ಯವಸ್ಥೆಯಲ್ಲಿ ಈಗ ಯಾವುದೂ ಹಿಂದಿನ ಹಾಗೆ ಇಲ್ಲ. ಹಲವು ಬದಲಾವಣೆಗಳಾಗಿವೆ. ಅದು ರಾಜಕೀಯ ರಂಗ ಅಂತಲ್ಲ, ಮಾಧ್ಯಮ ಸೇರಿದಂತೆ ಸಮಾಜದ ಎಲ್ಲ ರಂಗಗಳಲ್ಲೂ ಬದಲಾವಣೆಯಾಗಿದೆ ಎಂದರು.
ಪತ್ರಕರ್ತರಾದ ಹುಣಸವಾಡಿ ರಾಜನ್, ಎಂ.ಸಿದ್ಧರಾಜು, ಅ.ಮ.ಸುರೇಶ್, ಬಿ.ಪಿ.ಮಲ್ಲಪ್ಪ, ಮೈ.ಸಿ.ಪಾಟೀಲ್, ಬೆಲಗೂರು ಸಮೀವುಲ್ಲಾ, ಶಾಂತಲಾ ಧರ್ಮರಾಜ್ ಮಾತನಾಡಿದರು.
ಮಾಜಿ ಸಚಿವ ಕೆ.ಗೋಪಾಲಯ್ಯ, ಉದ್ಯಮಿ ಸ್ಟಾರ್ ಚಂದ್ರು, ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ದಯಾನಂದ್, ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಸದಾಶಿವ ಶೆಣೈ ಹಾಜರಿದ್ದರು.
ಇದೇ ವೇಳೆ ಕೂಟದ ಸಂಸ್ಥಾಪಕ ಸದಸ್ಯ ಪ್ರಹ್ಲಾದ್ ಕುಳಲಿ, ಎಂ.ಸಿದ್ದರಾಜು ಮತ್ತು ಅ.ಮ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.