ADVERTISEMENT

ಆಸ್ತಿ ತೆರಿಗೆ ಪರಿಷ್ಕರಣೆ ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 20:23 IST
Last Updated 15 ಅಕ್ಟೋಬರ್ 2020, 20:23 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ‘ಸದ್ಯ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ನಗರದ ಕಟ್ಟಡ ಮಾಲೀಕರ ಹಿತದೃಷ್ಟಿಯಿಂದ ಬಿಬಿಎಂಪಿ ಉದ್ದೇಶಿತ ವಸತಿ, ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಪರಿಷ್ಕರಿಸುವ ಪ್ರಸ್ತಾವನೆಯನ್ನು ಮುಂದೂಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶಾಸಕ ರಾಮಲಿಂಗಾ ರೆಡ್ಡಿ ಪತ್ರ ಬರೆದಿದ್ದಾರೆ.

‘ವಸತಿ, ವಾಣಿಜ್ಯ, ಕೈಗಾರಿಕಾ ಕಟ್ಟಡಗಳ ಆಸ್ತಿ ತೆರಿಗೆಯನ್ನು ಶೇ 15ರಿಂದ ಶೇ 30ರವರೆಗೆ ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ. ಆದರೆ, ನಗರದ ಬಹುತೇಕ ಕಾರ್ಯಚಟುವಟಿಕೆ, ವ್ಯಾಪಾರ–ವಹಿವಾಟು ಸ್ಥಗಿತಗೊಂಡಿದೆ. ಇದರಿಂದಾಗಿ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿ, ಬಾಡಿಗೆ, ಸಂಬಳ ನೀಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಅನೇಕರು ಬೆಂಗಳೂರು ತ್ಯಜಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸುವುದು ಸೂಕ್ತವಲ್ಲ’ ಎಂದೂ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಬಾಡಿಗೆಯನ್ನೇ ತಮ್ಮ ಜೀವನದ ಆದಾಯವೆಂದು ನಂಬಿದ ಕಟ್ಟಡ ಮಾಲೀಕರು, ಬಾಡಿಗೆದಾರರಿಲ್ಲದೆ, ಸರಿಯಾಗಿ ಬಾಡಿಗೆ ಸಿಗದೆ, ನಿಗದಿತ ಆದಾಯ ಇಲ್ಲದೆ, ಸಾಲದ ಕಂತು ಪಾವತಿಸಲಾಗದೆ ದುಸ್ಥಿತಿಯಲ್ಲಿದ್ದಾರೆ. ಹೀಗಾಗಿ, ಪ್ರಸ್ತಾವನೆಯನ್ನು ಮುಂದೂಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.