ADVERTISEMENT

ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 15:28 IST
Last Updated 19 ಜುಲೈ 2025, 15:28 IST
<div class="paragraphs"><p>ಘಟಿಕೋತ್ಸವ ಸಮಾರಂಭದಲ್ಲಿ ಆಗಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅರ್ಚಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.&nbsp; ಶಾಸಕ ಉದಯ ಗರುಡಾಚಾರ್, ರಾಮಲಿಂಗಾರೆಡ್ಡಿ, ನಿಶ್ಚಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.</p></div>

ಘಟಿಕೋತ್ಸವ ಸಮಾರಂಭದಲ್ಲಿ ಆಗಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅರ್ಚಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.  ಶಾಸಕ ಉದಯ ಗರುಡಾಚಾರ್, ರಾಮಲಿಂಗಾರೆಡ್ಡಿ, ನಿಶ್ಚಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮುಜರಾಯಿ ದೇವಸ್ಥಾನಗಳ ಅರ್ಚಕರ ವೇತನ ತಾರತಮ್ಯ ನಿವಾರಿಸಲು ಕ್ರಮವಹಿಸಲಾಗಿದೆ. ಎ ಮತ್ತು ಬಿ ದರ್ಜೆ ದೇವಾಲಯಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. 

ADVERTISEMENT

ಇಲಾಖೆಯ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆಗಮ ಘಟಿಕೋತ್ಸವ’ದಲ್ಲಿ ಆಗಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಚಕರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

‘ಅರ್ಚಕರ ವೇತನ ತಾರತಮ್ಯತೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧರಿಸಿ, ಕ್ರಮಕೈಗೊಳ್ಳಲಾಗುತ್ತದೆ. ಅರ್ಚಕರ ಬ್ಯಾಂಕ್‌ ಖಾತೆಗೆ ನೇರವಾಗಿ ತಸ್ತಿಕ್ ಜಮಾ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಇಲಾಖೆಯ ಆ್ಯಪ್‌ನಲ್ಲಿ ಅರ್ಚಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಹೇಳಿದರು.

‘ಘಾಟಿ ಸುಬ್ರಹ್ಮಣ್ಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿ ಪ್ರಮುಖ ದೇವಾಲಯಗಳನ್ನು, ಮಂತ್ರಾಲಯದ ರಥಬೀದಿ ಮಾದರಿಯಲ್ಲಿ, ಕ್ಷೇತ್ರದ ಮಹತ್ವ ಹಾಗೂ ಮಹಿಮೆಗಳನ್ನು ಸಾರುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು. 

ಮೂಲಸೌಕರ್ಯ ಕೊರತೆ: ‘ರಾಜ್ಯದಲ್ಲಿ ಎ ದರ್ಜೆಯ 205, ಬಿ ದರ್ಜೆಯ 195 ಹಾಗೂ ಸಿ ದರ್ಜೆಯ 34,217 ದೇವಾಲಯಗಳು ಮುಜರಾಯಿ ಇಲಾಖೆ ಅಡಿ ನಿರ್ವಹಣೆ ಮಾಡಲಾಗುತ್ತಿದೆ. ಎ ಮತ್ತು ಬಿ ದರ್ಜೆಯ ದೇವಾಲಯಗಳಿಗೆ ಹೆಚ್ಚಿನ ಆದಾಯ ಇದೆಯಾದರೂ, ಮೂಲಸೌಕರ್ಯಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಬಹಳಷ್ಟು ದೇವಾಲಯಗಳ ಅಭಿವೃದ್ಧಿ ಹಾಗೂ ಸೌಕರ್ಯಕ್ಕಾಗಿ ಕ್ರಮ ವಹಿಸಲಾಗಿದೆ’ ಎಂದು ರಾಮಲಿಂಗಾರೆಡ್ಡಿ ಹೇಳಿದರು. 

ಮೇಲುಕೋಟೆಯ ಸರ್ಕಾರಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉಮಾಕಾಂತ ಭಟ್ಟ ಅವರು ಘಟಿಕೋತ್ಸವ ಭಾಷಣ ಮಾಡಿದರು. ಇದೇ ವೇಳೆ ವಿವಿಧ ಆಗಮಗಳ ವಿದ್ವಾಂಸರನ್ನು ಗೌರವಿಸಲಾಯಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
 

ಸಿ ವರ್ಗದ ದೇವಾಲಯಗಳಿಗೆ ಆದಾಯವಿಲ್ಲ. ಇದರಿಂದಾಗಿ ಅರ್ಚಕರು ತಸ್ತಿಕ್‌ ಅವಲಂಬಿಸಬೇಕಾಗಿದೆ. ಅವರಿಗೂ ಗೌರವಧನ ಒದಗಿಸಬೇಕು
ರವಿ ಸುಬ್ರಮಣ್ಯ ಬಸವನಗುಡಿ ಶಾಸಕ
‘ಪ್ರತಿಮೆಗಳ ಮೂಲಕ ಭಗವಂತನ ಆರಾಧನೆ’
‘ದೇವಾಲಯಗಳು ಭಾರತೀಯ ಸಂಸ್ಕೃತಿಯ ರಕ್ಷಣೆಯ ಕೇಂದ್ರಬಿಂದುಗಳಾಗಿವೆ. ಪ್ರತಿಮೆಗಳ ಆರಾಧನೆ ಬಗ್ಗೆ ಹಿಂದೂ ಸಮಾಜದ ಕೆಲವರಲ್ಲಿ ಆಕ್ಷೇಪವಿದೆ. ವಸ್ತು ಸಂಗ್ರಹಾಲಯದಲ್ಲಿ ಸಾವಿರಾರು ಪ್ರತಿಮೆಗಳಿದ್ದರೂ ಅಲ್ಲಿಗೆ ಹೋಗಿ ಯಾರೂ ಪೂಜಿಸುವುದಿಲ್ಲ. ಆಗಮ ಶಾಸ್ತ್ರದ ಅನುಸಾರ ಪ್ರತಿಮೆಗಳಲ್ಲಿ ಭಗವಂತನ ಸನ್ನಿಧಾನ ತುಂಬಿದ ಬಳಿಕವೇ ಆರಾಧನೆ ನಡೆಯುತ್ತದೆ. ಆದ್ದರಿಂದ ಪ್ರತಿಮೆಗಳ ಮೂಲಕ ಭಗವಂತನನ್ನು ಆರಾಧಿಸುತ್ತಿದ್ದೇವೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
₹15 ಕೋಟಿ ಮೌಲ್ಯದ ಆಸ್ತಿ ಇಲಾಖೆಗೆ
ಮೈಸೂರಿನ ಜಿ.ಲಕ್ಷಮ್ಮ ಎಂಬುವರು ತಮ್ಮ ಒಡೆತನದಲ್ಲಿರುವ ಅಂದಾಜು ₹ 15 ಕೋಟಿ ಮೌಲ್ಯದ ಆಸ್ತಿಯನ್ನು ಮರಣದ ನಂತರ ಧಾರ್ಮಿಕ ದತ್ತಿ ಇಲಾಖೆಗೆ ನೀಡಲು ಮರಣ ಶಾಸನ ಮಾಡಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಕ್ಕಾಗಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.  ಮೈಸೂರಿನ ಎ.ಎಸ್.ಗೋಪಾಲಕೃಷ್ಣ ಅಯ್ಯಂಗಾರ್ ಮತ್ತು ರಂಗನಾಯಕಮ್ಮ ದಂಪತಿಯ ಪುತ್ರಿ 84 ವರ್ಷದ ಜಿ.ಲಕ್ಷಮ್ಮ ಅವರು ಮೈಸೂರಿನಲ್ಲಿರುವ 80x50 ಚದರ ಅಡಿ ವಿಸ್ತೀರ್ಣದ ಮನೆ ಮಲ್ಲೇಶ್ವರದಲ್ಲಿರುವ ಅಪಾರ್ಟ್‌ಮೆಂಟ್ ಬ್ಯಾಂಕ್‌ ಖಾತೆಯಲ್ಲಿರುವ ₹ 6 ಕೋಟಿ ಹಾಗೂ ಚಿನ್ನ ಬೆಳ್ಳಿಯ ಆಭರಣಗಳನ್ನು ಇಲಾಖೆಗೆ ದಾನ ಮಾಡಲು ನೋಂದಣಿ ಮಾಡಿಸಿ ಪತ್ರವನ್ನು ಇಲಾಖೆಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.