ADVERTISEMENT

ದೇಶದ ಮೊದಲ ಲಿಫ್ಟ್ ಸೇತುವೆ ಉದ್ಘಾಟನೆಗೆ ಸಜ್ಜು

ಭಾರತ ನೆಲದಿಂದ ರಾಮೇಶ್ವರ ದ್ವೀಪಕ್ಕೆ ಸಂಪರ್ಕ * ₹531 ಕೋಟಿ ವೆಚ್ಚದಲ್ಲಿ ನಿರ್ಮಾಣ

ಆದಿತ್ಯ ಕೆ.ಎ
Published 9 ಫೆಬ್ರುವರಿ 2025, 21:28 IST
Last Updated 9 ಫೆಬ್ರುವರಿ 2025, 21:28 IST
ತಮಿಳುನಾಡಿನ ಪಂಬನ್‌ನಲ್ಲಿ ನಿರ್ಮಿಸಿರುವ ರೈಲ್ವೆ ಸೇತುವೆ
ತಮಿಳುನಾಡಿನ ಪಂಬನ್‌ನಲ್ಲಿ ನಿರ್ಮಿಸಿರುವ ರೈಲ್ವೆ ಸೇತುವೆ   

ರಾಮೇಶ್ವರ (ತಮಿಳುನಾಡು): ಭಾರತದ ನೆಲದಿಂದ ರಾಮೇಶ್ವರ ದ್ವೀಪವನ್ನು ಸಂಪರ್ಕಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಪಂಬನ್ ಲಿಫ್ಟ್ ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ. ಉದ್ಘಾಟನೆಯ‌ ಬಳಿಕ ರೈಲುಗಳು ಮಂಡಪಂ ಹಾಗೂ ಪಂಬನ್ ನಿಲ್ದಾಣಗಳ ನಡುವೆ ಈ ಸೇತುವೆಯ ಮೂಲಕ ಸಂಚಾರ ನಡೆಸಲಿವೆ.

ಬಂಗಾಳಕೊಲ್ಲಿಯಲ್ಲಿರುವ ರಾಮೇಶ್ವರ ದ್ವೀಪಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದ್ದ ಸೇತುವೆ ಶಿಥಿಲಗೊಂಡಿದ್ದರಿಂದ 2019ರಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಪಾಕ್ ಜಲಸಂಧಿ ಎಂದೇ ಗುರುತಿಸಲಾಗುವ ಈ ಸ್ಥಳದಲ್ಲಿ ಇದೀಗ 2.10 ಕಿ.ಮೀ ಉದ್ದದ ಹೊಸ ಸೇತುವೆಯನ್ನು ₹531 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.  ಲಂಬವಾಗಿ ತೆರೆದುಕೊಳ್ಳುವ ದೇಶದ ಮೊದಲ ಸೇತುವೆ ಇದಾಗಿದೆ. ಈ ಸೇತುವೆಯ ಮೇಲೆ ರೈಲಿನ ಪ್ರಾಯೋಗಿಕ ಸಂಚಾರವು ಯಶಸ್ವಿಯಾಗಿದೆ.

ಸ್ಪೇನ್ ಹಾಗೂ ಜರ್ಮನಿಯ ತಂತ್ರಜ್ಞಾನ ಬಳಸಿ ಲಂಬವಾಗಿ ತೆರೆದುಕೊಳ್ಳುವ ಸೇತುವೆಯನ್ನು ಭೂ ಭಾಗದಿಂದ 600 ಮೀಟರ್ ದೂರದಲ್ಲಿ ನಿರ್ಮಾಣ ಮಾಡಲಾಗಿದ್ದು, ಲಿಫ್ಟ್ ಅಳವಡಿಕೆಯೇ ಸೇತುವೆಯ ವಿಶೇಷ.

ADVERTISEMENT

‘ಈ ಸೇತುವೆ ಮೇಲೆ ಗಂಟೆಗೆ 75 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಬಹುದಾಗಿದೆ. 333 ಪಿಲ್ಲರ್‌ಗಳನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಲಿಫ್ಟ್ ಸ್ಪ್ಯಾನ್ ಹಾಗೂ ರೈಲ್ವೆ ಟ್ರ್ಯಾಕ್ 660 ಟನ್ ತೂಕವಿದೆ. ವಿದ್ಯುತ್ ಸಹಾಯದಿಂದ 5 ನಿಮಿಷ 30 ಸೆಕೆಂಡ್‌ಗಳಲ್ಲಿ ಮೇಲಕ್ಕೆ ಎತ್ತರಿಸಿ, ಕೆಳಭಾಗದಲ್ಲಿ ಮೀನುಗಾರಿಕೆಯ ಬೃಹತ್ ದೋಣಿಗಳು ಹಾಗೂ ಕರಾವಳಿ ಕಾವಲು ಪಡೆ ಮತ್ತು ಸರಕು ಸಾಗಣೆ ದೋಣಿಗಳು ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸೇತುವೆಯ ಬಾಳಿಕೆ ಅವಧಿ 100 ವರ್ಷ ಎಂದು ಅಂದಾಜಿಸಲಾಗಿದೆ. ನಂತರ ನಿರ್ವಹಣೆ ಮಾಡಿದರೆ ಇನ್ನೂ ಹಲವು ವರ್ಷ ಸೇತುವೆ ಸುಭದ್ರವಾಗಿರಲಿದೆ‘ ಎಂದು ಹೈದರಾಬಾದ್‌ನ ಬಾಲಾಜಿ ರೈಲು -ರೋಡ್ ಸಿಸ್ಟಂ‌ನ ಎಂಜಿನಿಯರ್ ಕೆ.ವೇಲು ಮುರುಗನ್ ತಿಳಿಸಿದರು.

‘ಪಂಬನ್‌ ಸೇತುವೆಯನ್ನು ಸಮುದ್ರದಲ್ಲಿ ನಿರ್ಮಿಸಿರುವುದರಿಂದ ತುಕ್ಕು ಹಿಡಿಯುವುದನ್ದು ತಡೆಯಲು ಪಾಲಿಸಿಲೋಕ್ಸೇನ್ ಬಣ್ಣವನ್ನು ಎರಡು ಪದರಗಳಲ್ಲಿ ಬಳಸಲಾಗಿದೆ. ಸೇತುವೆಗೆ ತುಕ್ಕುನಿರೋಧಕ ಉಕ್ಕು ಬಳಸಲಾಗಿದೆ‌. ಅಪಾಯದ ಎಚ್ಚರಿಕೆ ನೀಡಲು ಸೆನ್ಸಾರ್ ಅಳವಡಿಲಾಗಿದೆ‌. ಇದರಿಂದ ಗಾಳಿಯ ವೇಗ ಪತ್ತೆ ಸಾಧ್ಯವಾಗಲಿದೆ. ಚಂಡಮಾರುತದಂತಹ ಸಂದರ್ಭದಲ್ಲಿ ರೈಲು ಸಂಚಾರವನ್ನು ಸ್ವಯಂ ಚಾಲಿತವಾಗಿ ನಿಲುಗಡೆ ಮಾಡಬಹುದಾಗಿದೆ’ ಎಂದು ಎಂಜಿನಿಯರ್ ವಿವರಿಸಿದರು.

ಭಾರತ ಹಾಗೂ ಶ್ರೀಲಂಕಾ ನಡುವೆ ವ್ಯಾಪಾರ ಸಂಬಂಧ ಸುಧಾರಿಸಲು, ಪಾಕ್ ಜಲಸಂಧಿ ಹಾದುಹೋಗುವ ಈ ಪ್ರದೇಶದಲ್ಲಿ 1914ರಲ್ಲಿ ರೈಲ್ವೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಭಾರತದ ನೆಲದಿಂದ ರಾಮೇಶ್ವರ ದ್ವೀಪವನ್ನು ಸಂಪರ್ಕಿಸಲು ಅದೊಂದೇ ಮಾರ್ಗವಾಗಿತ್ತು. 1988ರಲ್ಲಿ ರಸ್ತೆ ಸೇತುವೆ ನಿರ್ಮಾಣ ಮಾಡಲಾಯಿತು.‌

1964ರಲ್ಲಿ ಚಂಡಮಾರುತದಿಂದ ರೈಲು ಸಂಚಾರಕ್ಕೆ ನಿರ್ಮಿಸಿದ್ದ ಸೇತುವೆಗೆ ಹಾನಿಯಾಗಿತ್ತು. ನಂತರ ದುರಸ್ತಿಗೊಳಿಸಿ ರೈಲು ಮಾರ್ಗವನ್ನು ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತಿಸಲಾಗಿತ್ತು. ಸೇತುವೆಗೆ 110 ವರ್ಷ ಆಗಿದ್ದರಿಂದ ಅದರ ಪಕ್ಕದಲ್ಲೇ ಹೊಸ ಸೇತುವೆ ತಲೆ ಎತ್ತಿದೆ. ಹಳೆಯ ಸೇತುವೆಯಲ್ಲಿದ್ದ ಗೇಟ್‌ಗಳು ಮೇಲಕ್ಕೆ ಹೋಗಿ ದೋಣಿಗಳ ಸಂಚಾರಕ್ಕೆ ಮುಕ್ತವಾಗಲು 44 ನಿಮಿಷ ಬೇಕಿತ್ತು. ಹೊಸ ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ಹಳೆಯ ಸೇತುವೆ ತೆರವು ಮಾಡಲಾಗುವುದು ಎಂದು ಎಂಜಿನಿಯರ್‌ಗಳು ಹೇಳಿದರು.

(ರೈಲ್ವೆ ಇಲಾಖೆ ಆಹ್ವಾನದ ಮೇರೆಗೆ ವರದಿಗಾರ ರಾಮೇಶ್ವರಕ್ಕೆ ತೆರಳಿದ್ದರು)

ತಮಿಳುನಾಡಿನ ಪಂಬನ್‌ನಲ್ಲಿ ನಿರ್ಮಿಸಿರುವ ರೈಲ್ವೆ ಸೇತುವೆ
ಮಂಜುನಾಥ ಕನಮಡಿ
2022ರಲ್ಲಿ ಹಳೆಯ ಸೇತುವೆ ಶಿಥಿಲಗೊಂಡು ರೈಲು ಸಂಚಾರ ಬಂದ್ ಆಗಿತ್ತು. ರಾಮೇಶ್ವರದಲ್ಲಿರುವ ದೇವಸ್ಥಾನ ಧನುಷ್ಕೋಡಿಗೆ ತೆರಳುವ ಪ್ರಯಾಣಿಕರು ರಸ್ತೆ ಮಾರ್ಗವನ್ನೇ ಅವಲಂಬಿಸಿದ್ದರು. ಹೊಸ ಸೇತುವೆಯಿಂದ ಭಕ್ತರು ಪ್ರವಾಸಿಗರಿಗೆ ಅನುಕೂಲವಾಗಲಿದೆ
ಮಂಜುನಾಥ ಕನಮಡಿ ಸಿಪಿಆರ್‌ಒ ನೈರುತ್ಯ ರೈಲ್ವೆ ವಲಯ

ಸೇತುವೆ ಉದ್ಘಾಟಿಸಲಿರುವ ಪ್ರಧಾನಿ

‘ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ನಂತರ ರೈಲ್ವೆ ಸಚಿವರ ಜೊತೆಗೂಡಿ ನೂತನ ಲಿಫ್ಟ್ ಸೇತುವೆ ಪರಿಶೀಲಿಸುವರು’ ಎಂದು ಎಂಜಿನಿಯರ್‌ಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.