ADVERTISEMENT

ರಾಮೇಶ್ವರಂ ಕೆಫೆ ಪ್ರಕರಣ: ಸ್ಫೋಟದ ಸಂಚಿಗೆ ‘ಕೋಡ್ ವರ್ಡ್’ ಸಂಭಾಷಣೆ

ಶಂಕಿತರಿಬ್ಬರ ವಿಚಾರಣೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 23:38 IST
Last Updated 14 ಏಪ್ರಿಲ್ 2024, 23:38 IST
ದಿ ರಾಮೇಶ್ವರಂ ಕೆಫೆ
ದಿ ರಾಮೇಶ್ವರಂ ಕೆಫೆ   

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಶಂಕಿತರಾದ ಅಬ್ದುಲ್ ಮಥೀನ್ ಅಹಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜೀಬ್ ತಮ್ಮದೇ ಪ್ರತ್ಯೇಕ ಕೋಡ್‌ ವರ್ಡ್‌ಗಳ ಮೂಲಕ ಸಂಭಾಷಣೆ ನಡೆಸುತ್ತಿದ್ದರೆಂಬ ಮಾಹಿತಿ ಕಲೆಹಾಕಿದ್ದಾರೆ.

ಇಸ್ಲಾಮಿಕ್ ಸ್ಟೇಟ್ (ಐಎಸ್‌) ಸಂಘಟನೆ ಉಗ್ರರೊಂದಿಗೆ ನಂಟು ಹೊಂದಿದ್ದವರ ಜೊತೆ ತಾಹಾ ಹಾಗೂ ಮುಸಾವೀರ್ ಸಂಪರ್ಕದಲ್ಲಿದ್ದರು. ಪ್ರಮುಖ ಉಗ್ರರ ಸೂಚನೆಯಂತೆ ವಿಧ್ವಂಸಕ ಕೃತ್ಯ ಎಸಗಲು ಅವರಿಬ್ಬರು ತಯಾರಿ ನಡೆಸುತ್ತಿದ್ದರು ಎಂಬ ಸಂಗತಿಯೂ ತನಿಖೆಯಿಂದ ಗೊತ್ತಾಗಿದೆ.

‘ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಕಾರಣವೇನು? ಎಂಬುದರ ಬಗ್ಗೆ ಮಾಹಿತಿ ತಿಳಿಯಬೇಕಿದೆ. ಈ ಬಗ್ಗೆ ಮುಸಾವೀರ್ ಹಾಗೂ ತಾಹಾನನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಅವರಿಂದ ಯಾವುದೇ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ADVERTISEMENT

‘ಬಾಂಬ್‌ ಸ್ಫೋಟದ ಸಂಚು ಹಾಗೂ ಪರಾರಿ ಮಾರ್ಗದ ಬಗ್ಗೆ ಶಂಕಿತರಿಬ್ಬರು ಕೋಡ್‌ ವರ್ಡ್ ಮೂಲಕ ಸಂಭಾಷಣೆ ನಡೆಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಆದರೆ, ಕೋಡ್ ವರ್ಡ್‌ಗಳ ಅರ್ಥವೇನು ? ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಶಂಕಿತರು, ತಮ್ಮದೇ ಪ್ರತ್ಯೇಕ ಭಾಷೆಯ ರೀತಿಯಲ್ಲಿ ಕೋಡ್‌ ವರ್ಡ್‌ ಬಳಸುತ್ತಿದ್ದರು. ಈ ಕೋಡ್‌ ವರ್ಡ್‌ಗಳನ್ನು ಭೇದಿಸಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿವೆ.

ಆ್ಯಪ್‌ನಲ್ಲೂ ಕೋಡ್‌ ವರ್ಡ್‌: ‘ಮುಸಾವೀರ್ ಹಾಗೂ ತಾಹಾ ಮಾತ್ರವಲ್ಲದೇ ಇನ್ನು ಹಲವು ಶಂಕಿತರು ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಇವರೆಲ್ಲರೂ ಆ್ಯಪ್‌ ಮೂಲಕ ಪರಸ್ಪರ ಸಂಭಾಷಣೆ ನಡೆಸುತ್ತಿದ್ದರು. ಪ್ರತಿಯೊಬ್ಬರು ತಮ್ಮದೇ ಕೋಡ್‌ ವರ್ಡ್‌ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಕೃತ್ಯದ ಬಗ್ಗೆ ಯಾರಿಗೂ ಯಾವ ಮಾಹಿತಿಯೂ ಗೊತ್ತಾಗಬಾರದೆಂಬ ಕಾರಣಕ್ಕೆ ಶಂಕಿತರೇ ಪ್ರತ್ಯೇಕ ಭಾಷೆ ರೂಪಿಸಿರುವ ಶಂಕೆಯೂ ಇದೆ. ಮುಸಾವೀರ್ ಬಳಿ ಸಿಕ್ಕಿರುವ ಕೆಲ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಕೋಡ್‌ ವರ್ಡ್‌ಗಳ ಪಟ್ಟಿಯೇ ಇದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿವೆ.

ಮತ್ತಷ್ಟು ಮಂದಿ ವಿಚಾರಣೆ: ‘ಮುಸಾವೀರ್ ಹಾಗೂ ತಾಹಾನಿಂದ ಹೇಳಿಕೆ ಪಡೆಯಲಾಗುತ್ತಿದೆ. ಹೇಳಿಕೆಯಲ್ಲಿ ಉಲ್ಲೇಖವಾಗುವ ಎಲ್ಲರನ್ನೂ ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.