ADVERTISEMENT

ಮೈಸೂರಿನಿಂದ ಬೆಂಗಳೂರಿಗೆ ‘ಪರ್ವ’

ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿ ಆಧಾರಿತ ನಾಟಕ * ಇದೇ 23, 24ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 12:50 IST
Last Updated 16 ಅಕ್ಟೋಬರ್ 2021, 12:50 IST
‘ಪರ್ವ’ ನಾಟಕದ ದೃಶ್ಯ
‘ಪರ್ವ’ ನಾಟಕದ ದೃಶ್ಯ   

ಬೆಂಗಳೂರು: ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿ ಆಧರಿತ ‘ಪರ್ವ’ ನಾಟಕದ ಪ್ರದರ್ಶನವನ್ನು ಇದೇ 23 ಮತ್ತು 24ರಂದು ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ರಂಗಾಯಣ ಆಯೋಜಿಸಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ‘43 ವರ್ಷ ಹಳೆಯ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಲಾಗಿದೆ. ಕೋವಿಡ್‌ ಕಾಲಘಟ್ಟದಲ್ಲಿ ರೂಪುಗೊಂಡಿರುವ ಈ ನಾಟಕಕ್ಕೆ ಮೈಸೂರಿನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿ ಏರ್ಪಡಿಸಿದ್ದ 16 ಪ್ರದರ್ಶನಗಳನ್ನು 6 ಸಾವಿರ ಮಂದಿ ವೀಕ್ಷಿಸಿದ್ದಾರೆ. ಮುಂದುವರಿದ ರಂಗ ಪ್ರಯೋಗದ ಮೊದಲ ಹೆಜ್ಜೆಯಾಗಿ ಈಗ ಬೆಂಗಳೂರಿನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ’ ಎಂದರು.

‘ಕಲಾವಿದರು ಸೇರಿದಂತೆ 60 ಮಂದಿಯ ತಂಡವು ಈ ನಾಟಕವನ್ನು ಸಿದ್ಧಪಡಿಸಿದೆ.ರಂಗಕರ್ಮಿ ಪ್ರಕಾಶ್‌ ಬೆಳವಾಡಿ ನಿರ್ದೇಶಿಸಿದ್ದಾರೆ. ನಾಟಕ ಸಿದ್ಧತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ₹ 50 ಲಕ್ಷ ಬಿಡುಗಡೆ ಮಾಡಿದೆ. ಒಂದು ವರ್ಷದಿಂದ 35ಕ್ಕೂ ಹೆಚ್ಚು ಕಲಾವಿದರಿಗೆ ಮಾಸಿಕ ಸಂಭಾವನೆ ₹ 38 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ದೇಶದ 5 ಕಡೆ ಪ್ರದರ್ಶನ: ‘ಈ ರಂಗಪ್ರಯೋಗ ರಾಜ್ಯ ಹಾಗೂ ದೇಶದ ವಿವಿಧೆಡೆ ಪ್ರದರ್ಶನಗೊಳ್ಳಲಿದೆ. 8 ಗಂಟೆಗಳ ಈ ನಾಟಕದಲ್ಲಿ ಮಧ್ಯಾಹ್ನ ಊಟಕ್ಕೆ ಅರ್ಧಗಂಟೆ ಹಾಗೂ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ನೀಡಲಾಗುತ್ತದೆ. ಸರ್ಕಾರವು ಘೋಷಿಸಿದ ಅನುದಾನವು ಬಿಡುಗಡೆಯಾದ ಬಳಿಕ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನ ನೀಡಲಾಗುತ್ತದೆ. ವಾರಾಣಸಿ, ಗುಜರಾತ್, ದೆಹಲಿ, ಮುಂಬೈ ಹಾಗೂ ಚಂಡೀಗಡದಲ್ಲಿ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ’ ಎಂದುಅಡ್ಡಂಡ ಸಿ. ಕಾರ್ಯಪ್ಪ ವಿವರಿಸಿದರು.

ರಂಗ ನಟ, ನಿರ್ದೇಶಕ ಬಿ.ವಿ. ರಾಜಾರಾಮ್, ‘ಪರ್ವ ಕಾದಂಬರಿಯನ್ನು ಓದಿದರೂ ನಾಟಕ ವೀಕ್ಷಿಸಿದಾಗ ಅದರ ಮಹತ್ವವು ಧ್ವನಿಪೂರ್ಣವಾಗಿ ತಲುಪಲಿದೆ. ಅನೇಕ ಪಾತ್ರಗಳಲ್ಲಿನ ಅಂತರಂಗದ ಮಾತುಗಳನ್ನು ಕೇಳಬಹುದಾಗಿದೆ’ ಎಂದು ಹೇಳಿದರು.

ನಗರದಲ್ಲಿ ಎರಡು ಪ್ರದರ್ಶನ

ನಾಟಕ ಪ್ರಸ್ತುತಿ: ರಂಗಾಯಣ ಮೈಸೂರು

ನಾಟಕ ನಿರ್ದೇಶನ: ಪ್ರಕಾಶ್ ಬೆಳವಾಡಿ

ಪ್ರದರ್ಶನದ ಅವಧಿ: ಬೆಳಿಗ್ಗೆ 10ರಿಂದ ಸಂಜೆ 6

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ

ಟಿಕೆಟ್ ದರ: ₹ 500, ₹ 250

ಟಿಕೆಟ್ ದೊರೆಯುವ ಸ್ಥಳ: ರವೀಂದ್ರ ಕಲಾಕ್ಷೇತ್ರ ಕೌಂಟರ್ಹಾಗೂ ಆನ್‌ಲೈನ್‌ ಕೊಂಡಿ: www.rangayana.org

ಸಂಪರ್ಕ ಸಂಖ್ಯೆ: 9449679780, 9341493458

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.