ADVERTISEMENT

ಬೆಂಗಳೂರು: ಪ್ರಯಾಣಿಕನ ಸೋಗಿನಲ್ಲಿ ರ‍್ಯಾಪಿಡೊ ಸವಾರನ ಸುಲಿಗೆ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 16:08 IST
Last Updated 9 ಸೆಪ್ಟೆಂಬರ್ 2023, 16:08 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಪ್ರಯಾಣಿಕನ ಸೋಗಿನಲ್ಲಿ ರ‍್ಯಾಪಿಡೊ ಬೈಕ್ ಕಾಯ್ದಿರಿಸಿ ಸವಾರನನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿ ಪವನ್‌ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಗಸ್ಟ್ 29ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಸವಾರ ಮನು ಬಿ.ಸಿ. ದೂರು ನೀಡಿದ್ದರು. ಆರೋಪಿ ಪವನ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೆ.ಪಿ. ನಗರ ನಿವಾಸಿ ಮನು, ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆ್ಯಪ್‌ ಬಳಕೆದಾರ ಕಿರಣ್, ಹೊಸಕೆರೆಹಳ್ಳಿ ಕ್ರಾಸ್‌ನಿಂದ ಪೀಣ್ಯಕ್ಕೆ ಹೋಗಲು ಟ್ಯಾಕ್ಸಿ ಕಾಯ್ದಿರಿಸಿದ್ದರು. ಮನು ಬೈಕ್ ಸಮೇತ ಸ್ಥಳಕ್ಕೆ ಬಂದಿದ್ದರು. ಕಿರಣ್, ತನ್ನ ಸ್ನೇಹಿತ ಪವನ್‌ನನ್ನು ಬೈಕ್‌ನಲ್ಲಿ ಕೂರಿಸಿ ಹೋಗಿದ್ದರು.’

ADVERTISEMENT

‘ಸವಾರ ಮನುಗೆ ಚಾಕು ತೋರಿಸಿದ್ದ ಪವನ್, ಹಣ ನೀಡುವಂತೆ ಬೇಡಿಕೆ ಇರಿಸಿದ್ದ. ತಮ್ಮ ಬಳಿ ಹಣವಿಲ್ಲವೆಂದು ಮನು ಹೇಳಿದ್ದರು. ಮನು ಜೇಬಿನಲ್ಲಿ ಹುಡುಕಾಡಿದ್ದ ಆರೋಪಿ, ಎಟಿಎಂ ಕಾರ್ಡ್ ಹಾಗೂ ₹ 3,500 ನಗದು ಕಿತ್ತುಕೊಂಡಿದ್ದ. ನಂತರ, ಮನು ಅವರನ್ನು ಎಟಿಎಂ ಘಟಕಕ್ಕೆ ಕರೆದೊಯ್ದು ₹ 7,500 ಡ್ರಾ ಮಾಡಿಸಿಕೊಂಡಿದ್ದ. ನಂತರ, ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದ’ ಎಂದು ತಿಳಿಸಿವೆ.

‘ಸುಲಿಗೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ, ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತನ್ನ ತಪ್ಪಿಲ್ಲವೆಂದು ಹೇಳಿದ್ದ ಕಿರಣ್, ಸ್ನೇಹಿತ ಪವನ್‌ನನ್ನು ಮನೆಗೆ ಕಳುಹಿಸಲು ಬೈಕ್ ಕಾಯ್ದಿರಿಸಿದ್ದಾಗಿ ತಿಳಿಸಿದ್ದ. ಪವನ್‌ನನ್ನು ವಶಕ್ಕೆ ಪಡೆದಾಗ ತಪ್ಪೊಪ್ಪಿಕೊಂಡ’ ಎಂದು ಹೇಳಿವೆ.

ಹಣಕ್ಕಾಗಿ ಜಗಳ: ‘ಬೈಕ್ ಕಾಯ್ದಿರಿಸಿದ್ದ ಕಿರಣ್, ಕೇವಲ ₹ 100 ಪಾವತಿಸಿ ಸ್ಥಳದಿಂದ ಹೊರಟು ಹೋಗಿದ್ದರು. ಪ್ರಯಾಣ ದರ ಹೆಚ್ಚಿರುವುದಾಗಿ ಮನು ಹೇಳಿದ್ದರು. ಆದರೆ, ತನ್ನ ಬಳಿ ಹಣವಿಲ್ಲವೆಂದು ಪವನ್ ತಿಳಿಸಿದ್ದ. ಇದೇ ವಿಚಾರವಾಗಿ ಗಲಾಟೆ ಆಗಿತ್ತು. ಅವಾಗಲೇ ಪವನ್, ಮನು ಅವರನ್ನು ಅಪಹರಿಸಿ ಸುಲಿಗೆ ಮಾಡಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.