ADVERTISEMENT

ಬೆಂಗಳೂರು: ಮಹಿಳಾ ಟೆಕಿಗೆ ರ್‍ಯಾಪಿಡೊ ಚಾಲಕನಿಂದ ಹಲ್ಲೆ, ಬಂಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 15:42 IST
Last Updated 21 ಜನವರಿ 2024, 15:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬುಕ್ಕಿಂಗ್ ರದ್ದು ಮಾಡಿದಕ್ಕೆ ಕೋಪಗೊಂಡು ಮಹಿಳಾ ಟೆಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ರ್‍ಯಾಪಿಡೊ ಆಟೊ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬೆಳ್ಳಂದೂರಿನ ಗಂಗಾವರ ಪ್ರಸಾದ್(30) ಬಂಧಿತ. ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಬೆಳ್ಳಂದೂರಿನ ಗ್ರೀನ್‌ಲೇನ್ ಲೇಔಟ್‌ನಲ್ಲಿ ಘಟನೆ ನಡೆದಿತ್ತು.

ADVERTISEMENT

ಹಲ್ಲೆಗೆ ಒಳಗಾದ ಮಹಿಳಾ ಟೆಕಿಯ ಸ್ನೇಹಿತರೊಬ್ಬರು ‘ಎಕ್ಸ್’ ಖಾತೆಯಲ್ಲಿ ಘಟನೆ ವಿವರಿಸಿ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಒಡಿಶಾ ಮಹಿಳೆ ನಗರದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳ್ಳಂದೂರಿನ ಗ್ರೀನ್‌ಲೇನ್ ಲೇಔಟ್‌ನಲ್ಲಿರುವ ಪಿ.ಜಿಯಲ್ಲಿ ವಾಸವಾಗಿದ್ದಾರೆ. ಪಿಜಿಯಿಂದ ವೈಟ್‌ಫೀಲ್ಡ್‌ನ ತುರುಬನಹಳ್ಳಿಗೆ ತೆರಳಲು ಆಟೊ ಬುಕ್‌ ಮಾಡಿದ್ದರು. ಬುಕಿಂಗ್‌ ಸ್ವೀಕರಿಸಿದ ಆಟೊ ಸ್ಥಳಕ್ಕೆ ಬಂದಿತ್ತು. ಆಗ ತಡವಾಗಿ ಆಟೊ ಬಂದಿದೆ ಎಂದು ಆರೋಪಿಸಿ, ಬುಕ್ಕಿಂಗ್‌ ರದ್ದುಪಡಿಸಿದ್ದರು. ಇದರಿಂದ ಸಿಟ್ಟಾದ ಚಾಲಕ ನಿಂದಿಸಿ, ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.

‘ಮಹಿಳೆ ತುರ್ತಾಗಿ ತೆರಳ ಬೇಕಿದ್ದ ಕಾರಣಕ್ಕೆ ದೂರು ನೀಡಿಲ್ಲ. ಅವರ ಪರವಾಗಿ ನಾನೇ ದೂರು ನೀಡುತ್ತಿದ್ದೇನೆ’ ಎಂದು ಹೇಳಿ, ಘಟನೆ ವಿಡಿಯೊವನ್ನು ಪೋಸ್ಟ್‌ ಮಾಡಿದ್ದರು.

‘ಸ್ಥಳಕ್ಕೆ ತೆರಳಿದಾಗ ಬ್ಯಾಗ್‌ಗಳನ್ನು ಆಟೊದ ಒಳಕ್ಕೆ ಇಡುವಂತೆ ಮಹಿಳೆ ಹೇಳಿದರು. ನನಗೆ ಆರೋಗ್ಯ ಸರಿಯಿಲ್ಲ, ಬ್ಯಾಗ್‌ ಎತ್ತಿ ಇಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದೆ. ಅಷ್ಟಕ್ಕೆ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಶರ್ಟ್‌ ಹಿಡಿದು ಎಳೆದಾಡಿದರು. ಆಗ ಅವರನ್ನು ತಳ್ಳಿದೆ’ ಎಂದು ಚಾಲಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.