ADVERTISEMENT

ಬೆಂಗಳೂರು | ವಿರಳ ಕಾಯಿಲೆ ಜಾಗೃತಿ ಓಟ 23ಕ್ಕೆ

ಭಾರತೀಯ ವಿರಳ ಕಾಯಿಲೆ ಸಂಸ್ಥೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 14:44 IST
Last Updated 19 ಫೆಬ್ರುವರಿ 2025, 14:44 IST
   

ಬೆಂಗಳೂರು: ವಿರಳ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ವಿರಳ ಕಾಯಿಲೆ ಸಂಸ್ಥೆಯು (ಒಆರ್‌ಡಿಐ) ಇದೇ 23ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ಸೇರಿ ದೇಶದ 21 ನಗರಗಳಲ್ಲಿ ‘ರೇಸ್‌ ಫಾರ್ 7’ ಜಾಗೃತಿ ಓಟ ಹಮ್ಮಿಕೊಂಡಿದೆ.
 
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಆರ್‌ಡಿಐ ಸಹ ಸಂಸ್ಥಾಪಕ ಪ್ರಸನ್ನ ಶಿರೋಲ್, ‘ಬೆಂಗಳೂರಿನಲ್ಲಿ ಯು.ಬಿ. ಸಿಟಿ ಎದುರಿನ ಸೇಂಟ್ ಜೋಸೆಫ್‌ ಇಂಡಿಯನ್ ಹೈಸ್ಕೂಲ್ ಮೈದಾನದಿಂದ ಓಟ ಪ್ರಾರಂಭವಾಗಲಿದೆ. ಏಳು ಹಾಗೂ 10 ಕಿ.ಮೀ. ಓಟ ನಡೆಯಲಿದೆ. ಇದೇ ವೇಳೆ ಮೈಸೂರು, ನವದೆಹಲಿ, ಮುಂಬೈ, ಹೈದರಾಬಾದ್, ಜೈಪುರ, ಕೊಚ್ಚಿ, ಕೋಲ್ಕತ್ತ, ಚೆನ್ನೈ ಸೇರಿ ವಿವಿಧ ನಗರಗಳಲ್ಲಿಯೂ ನಡೆಯಲಿವೆ. ವಿರಳ ಕಾಯಿಲೆ ಎದುರಿಸುತ್ತಿರುವವರು, ಅವರ ಕುಟುಂಬಸ್ಥರು, ಸಾರ್ವಜನಿಕರು ಸಹ ಈ ಓಟದಲ್ಲಿ ಪಾಲ್ಗೊಳ್ಳುತ್ತಾರೆ. ದೇಶದಾದ್ಯಂತ ನಡೆಯುವ ಈ ಓಟದಲ್ಲಿ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಮೂರು ಸಾವಿರ ಜನರು ಭಾಗವಹಿಸಬಹುದು’ ಎಂದು ಹೇಳಿದರು.

‘ರೋಗದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ರೋಗಿಗಳಿಗೆ ಬೆಂಬಲ ಸೂಚಿಸಲು ನಿಧಿಯನ್ನೂ ಈ ಓಟದ ಮೂಲಕ ಸಂಗ್ರಹಿಸಲಾಗುತ್ತಿದೆ. ಓಟದಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಂಡು, ಹಣ ಪಾವತಿಸುವ ಅವಕಾಶ ನೀಡಲಾಗಿದೆ. ₹ 10 ಲಕ್ಷದಿಂದ ₹ 20 ಲಕ್ಷ ನಿಧಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದನ್ನು ರೋಗಿಗಳಿಗೆ ಪೂರಕ ಸೌಲಭ್ಯ ಒದಗಿಸಲು ಬಳಸಿಕೊಳ್ಳಲಾಗುವುದು. ಓಟ ಸಾಧ್ಯವಾಗದವರು ನಡಿಗೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದವರಿಗೆ ಟೀ ಶರ್ಟ್, ಪದಕ, ಪ್ರಮಾಣ ಪತ್ರ ಹಾಗೂ ತಿಂಡಿಯನ್ನೂ ಒದಗಿಸಲಾಗುತ್ತದೆ’ ಎಂದರು.

ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಡಾ. ಮೀನಾಕ್ಷಿ ಭಟ್, ‘ರೇಸ್‌ ಫಾರ್ 7 ಅಭಿಯಾನದ ಏಳು ಸಂಖ್ಯೆಯು ಏಳು ಸಾವಿರ ವಿರಳ ಕಾಯಿಲೆಗಳನ್ನು ಪ್ರತಿನಿಧಿಸುತ್ತದೆ. ಈ ಕಾಯಿಲೆಗಳು ಗೋಚರಿಸಲು ಕನಿಷ್ಠ ಏಳು ವರ್ಷಗಳು ಬೇಕಾಗುತ್ತವೆ. ದೇಶದಲ್ಲಿ ಏಳು ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಆನುವಂಶಿಕವಾಗಿದ್ದು, ಶೇಕಡ 5 ರಷ್ಟು ಕಾಯಿಲೆಗಳಿಗೆ ಮಾತ್ರ ನಿಖರ ಚಿಕಿತ್ಸೆಗಳು ಲಭ್ಯವಿವೆ. ಉಳಿದ ಶೇ 95 ರಷ್ಟು ಕಾಯಿಲೆಗಳಿಗೆ ಪೂರಕ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಇರುವ ಚಿಕಿತ್ಸೆಯೂ ದುಬಾರಿಯಾಗಿದೆ’ ಎಂದು ಹೇಳಿದರು.

ADVERTISEMENT

ನೋಂದಣಿಗೆ: registration.ordindia.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.