ADVERTISEMENT

ಬೆಂಗಳೂರು | ಸುಲಿಗೆಗೆ ಕಡಿವಾಣ: ಟ್ಯಾಂಕರ್‌ ನೀರಿಗೆ ದರ ನಿಗದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 21:30 IST
Last Updated 8 ಮಾರ್ಚ್ 2024, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯ ಖಾಸಗಿ ಟ್ಯಾಂಕರ್‌ಗಳಿಗೆ ದರ ನಿಗದಿ ಮಾಡಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ಬೇಸಿಗೆ ಶುರುವಾಗುತ್ತಿದ್ದಂತೆ ನೀರಿನ ಅಭಾವ ಉಂಟಾಗಿದ್ದು, ಬಹುತೇಕರು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಟ್ಯಾಂಕರ್ ಮಾಲೀಕರು, ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು.

ಸಾರ್ವಜನಿಕರ ಒತ್ತಾಯಗಳನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಜಲಮಂಡಳಿ ಅಧಿಕಾರಿಗಳು, ನೀರಿನ ಟ್ಯಾಂಕರ್ ದರ ನಿಗದಿಪಡಿಸುವಂತೆ ಕೋರಿದ್ದರು. ಅದೇ ಮನವಿ ಆಧರಿಸಿ ಜಿಲ್ಲಾಧಿಕಾರಿಯವರು ಇದೀಗ ಆದೇಶ ಹೊರಡಿಸಿದ್ದಾರೆ.

ADVERTISEMENT

ಎಲ್ಲ ತಾಲ್ಲೂಕು ಬರಪೀಡಿತ: ‘2023–24ನೇ ಸಾಲಿನ ಮುಂಗಾರಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸಲು 200 ನೀರಿನ ಟ್ಯಾಂಕರ್ ನೀಡುವಂತೆ ಹಾಗೂ ದರ ನಿಗದಿ ಮಾಡುವಂತೆ ಜಲಮಂಡಳಿಯವರು ಕೋರಿದ್ದರು. ಇದರನ್ವಯ ತಾಂತ್ರಿಕ ಸಮಿತಿಯನ್ನು ರಚಿಸಿ ದರ ನಿಗದಿ ಮಾಡಲಾಗಿದೆ. ದರಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಆದೇಶ ಉಲ್ಲಂಘಿಸಿದರೆ ಕ್ರಮ ಏನು?’
‘ತಾಂತ್ರಿಕ ಸಮಿತಿ ವರದಿಯಂತೆ ಕುಡಿಯುವ ನೀರು ಸರಬರಾಜಿಗೆ ಖಾಸಗಿ ಟ್ಯಾಂಕರ್‌ಗಳ ದರಗಳನ್ನು ನಿಗದಿಪಡಿಸಲಾಗಿದೆ’ ಎಂದಷ್ಟೇ ಜಿಲ್ಲಾಧಿಕಾರಿಯವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆದೇಶ ಪಾಲಿಸದಿದ್ದರೆ ಮಾಲೀಕರ ವಿರುದ್ಧ ಯಾವ ಕ್ರಮ? ಎಂಬುದನ್ನು ಉಲ್ಲೇಖಿಸಿಲ್ಲ. ‘ದುಪ್ಪಟ್ಟು ದರ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಜನರ ಬಳಿ ಬಂದು ಕಷ್ಟ ಕೇಳಬೇಕು. ರಸ್ತೆಗೆ ಇಳಿದು ಟ್ಯಾಂಕರ್‌ಗಳ ಪರಿಶೀಲನೆ ನಡೆಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.