
ಬೆಂಗಳೂರು: ‘ಗ್ರಹಣದ ಕುರಿತು ವೈಜ್ಞಾನಿಕವಾಗಿ ಚಿಂತಿಸುವ ಬದಲು ಜನರಲ್ಲಿ ಮೂಡನಂಬಿಕೆ ಬಿತ್ತಿ ಸಮಾಜವನ್ನು ತಪ್ಪು ದಾರಿಗೆ ಎಳೆಯುವುದನ್ನು ಕೈಬಿಡಿ’ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಹೇಳಿದರು.
ಮೂಢನಂಬಿಕೆ ವಿರೋಧಿ ಒಕ್ಕೂಟ ಪುರಭವನ ಎದುರು ಮಂಗಳವಾರ ಸಂಜೆ ಆಯೋಜಿಸಿದ್ದ ಚಂದ್ರಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ರಾಂತಿಯಿಂದ ನಾವು ಸಾಕಷ್ಟು ಮುಂದೆ ಹೋಗಿದ್ದೇವೆ. ಚಂದ್ರಗ್ರಹಣ, ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ ವಿಮರ್ಶಿಸುವ ಸಾಮರ್ಥ್ಯ ಸಂಪಾದಿಸಿದ್ದೇವೆ. ಆದರೆ ಧಾರ್ಮಿಕ, ಜ್ಯೋತಿಷ್ಯದ ನೆಲೆಯಲ್ಲಿ ನೋಡುವ ಮನೋಭಾವ ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟದ ಸಂಚಾಲಕ ಟಿ.ನರಸಿಂಹಮೂರ್ತಿ, ‘2010ರಿಂದಲೂ ಗ್ರಹಣದ ವೇಳೆ ಆಹಾರ ಸೇವಿಸುವ ಜತೆಗೆ ಇದರ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ‘ಗ್ರಹಣ ಎನ್ನುವುದು ಸಹಜವಾಗಿ ನಡೆಯುವ ಕ್ರಿಯೆ. ಇದರ ಕುರಿತು ಗೃಹಿಣಿಯರು, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆ ಹೊರತು ಭಯ ಹುಟ್ಟಿಸುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.
ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿದರು.
ಇದೇ ವೇಳೆ ಎಗ್ ಬಿರಿಯಾನಿ, ವೆಜಿಟೆಬಲ್ ಬಿರಿಯಾನಿ, ಕಾಯಿ ಹೋಳಿಗೆ, ಸಮೋಸಾ, ಹಣ್ಣುಗಳು, ಬಿಸ್ಕೇಟ್ ಅನ್ನು ಸೇವನೆ ಮಾಡಲಾಯಿತು.
ವಿಜ್ಞಾನಿಗಳು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.