ADVERTISEMENT

ಆರ್‌ಸಿ ಕಾಲೇಜನ್ನು ನಗರ ವಿವಿಯ ಘಟಕ ಕಾಲೇಜು ಮಾಡುವುದಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 16:27 IST
Last Updated 3 ಡಿಸೆಂಬರ್ 2025, 16:27 IST
   

ಬೆಂಗಳೂರು: ನಗರದ ರಾಮ್ ನಾರಾಯಣ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು(ಆರ್‌ಸಿ ಕಾಲೇಜು) ಮನಮೋಹನಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನಾಗಿ ಪರಿವರ್ತಿಸುವ ಪ್ರಯತ್ನ ಶುರುವಾಗಿದೆ.

‘ಈ ಕಾಲೇಜನ್ನು ಘಟಕ ಕಾಲೇಜನ್ನಾಗಿ ಪರಿವರ್ತಿಸುವ ಮೊದಲು ಸಾಧಕ, ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ಕಾಲೇಜಿನ ಕಾಯಂ ಬೋಧಕ ಹಾಗೂ ಬೋಧಕರ ಹುದ್ದೆ, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲಿರುವವರ ಪಿಂಚಣಿ ವಿವರ, ನಿವೃತ್ತ ಹಾಗೂ ನಿವೃತ್ತಗೊಳ್ಳಲಿರುವವರ ಒಪಿಎಸ್‌ ಹಾಗೂ ಎನ್‌ಪಿಎಸ್‌ ವಿವರ, ಸರ್ಕಾರ ನೀಡುತ್ತಿರುವ ಅನುದಾನ, ಕಾಲೇಜಿನ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ವಿವರಗಳನ್ನು ಒದಗಿಸಬೇಕು’ ಎಂದು ಕುಲಸಚಿವ ನವೀನ್‌ ಜೋಸೆಫ್‌ ಅವರು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. 

ಎಐಡಿಎಸ್‌ಒ ವಿರೋಧ: ಇತಿಹಾಸ ಪ್ರಸಿದ್ಧ ಆರ್‌ಸಿ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ಘಟಕ ಕಾಲೇಜನ್ನಾಗಿ ಪರಿವರ್ತಿಸುವುದಕ್ಕೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವಿರೋಧ ವ್ಯಕ್ತಪಡಿಸಿದೆ.

ADVERTISEMENT

‘ಘಟಕ ಕಾಲೇಜನ್ನಾಗಿ ಪರಿವರ್ತಿಸುವುದರಿಂದ ಶುಲ್ಕ ಹೆಚ್ಚಳಕ್ಕೆ ದಾರಿಯಾಗಲಿದೆ. ಇದರಿಂದ ಕಾರ್ಮಿಕ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದುಬಾರಿಯಾಗಲಿದೆ. ಈ ಪ್ರಕ್ರಿಯೆ ನಿಲ್ಲಿಸಿ ಸರ್ಕಾರಿ ಕಾಲೇಜು ಆಗಿಯೇ ಬಲಪಡಿಸಬೇಕು. ಇಲ್ಲದೇ ಇದ್ದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ’ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.