ಬೆಂಗಳೂರು: ಜಯನಗರ ಕ್ಷೇತ್ರದ ಜೆ.ಪಿ.ನಗರ ಹಾಗೂ ಸಾರಕ್ಕಿ ವಾರ್ಡ್‌ಗಳಲ್ಲಿ ಇತ್ತೀಚೆಗಷ್ಟೇ ಅಭಿವೃದ್ಧಿಗೊಂಡು ಸುಸ್ಥಿತಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಮತ್ತೆ ಟೆಂಡರ್ ಕರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರ ಅಧೀನದ ತಾಂತ್ರಿಕ ಜಾಗೃತ ಕೋಶ (ಟಿವಿಸಿಸಿ) ವರದಿ ಸಲ್ಲಿಸಿದೆ.
ಟೆಂಡರ್ ಕರೆದಿರುವ 10 ರಸ್ತೆಗಳ ಪೈಕಿ ಒಂಬತ್ತು ರಸ್ತೆಗಳು ಸುಸ್ಥಿತಿಯಲ್ಲಿವೆ ಎಂದು 38 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿರುವ ರಸ್ತೆಗಳಿಗೆ ಮತ್ತೆ ಟೆಂಡರ್ ಕರೆಯಲಾಗಿದೆ‘ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಬಿಬಿಎಂಪಿ ಆಡಳಿತಾಧಿಕಾರಿಗೆ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರಿಗೆ ದೂರು ನೀಡಿದ್ದರು. ಈ ಟೆಂಡರ್ ಪ್ರಕ್ರಿಯೆ ತಡೆ ಹಿಡಿಯುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಕ್ಟೋಬರ್ 14ರಂದು ಸೂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಟಿವಿಸಿಸಿಗೆ ಸೂಚಿಸಿದ್ದರು.
ಜೆ.ಪಿ.ನಗರ ಹಾಗೂ ಸಾರಕ್ಕಿ ವಾರ್ಡ್‌ಗಳ 10 ರಸ್ತೆಗಳನ್ನು ಒಟ್ಟು ₹ 7.94 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ಪಡಿಸಲು ಜಯನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು ಸೆ.21ರಂದು ಅಲ್ಪಾವಧಿ ಟೆಂಡರ್ ಕರೆದಿದ್ದರು. ಟೆಂಡರ್ ಅರ್ಜಿ
ಸಲ್ಲಿಸುವುದಕ್ಕೆ ಅ.12 ಕೊನೆಯ ದಿನವಾಗಿತ್ತು.
ಅಭಿವೃದ್ಧಿ ಕಾಮಗಾರಿಗಳಿಗಾಗಿ ಟೆಂಡರ್ ಕರೆದಿರುವ 10 ರಸ್ತೆಗಳಲ್ಲೂ ಈ ಹಿಂದೆ ಏನೆಲ್ಲ ಕಾಮಗಾರಿ ನಡೆಸಲಾಗಿದೆ. ಅವುಗಳ ಈಗಿನ ಸ್ಥಿತಿ ಹೇಗಿದೆ ಎಂಬ ಬಗ್ಗೆ ಛಾಯಾಚಿತ್ರಗಳ ಸಮೇತ ಸಂಪೂರ್ಣ ವರದಿ ನೀಡಬೇಕು. ಅಷ್ಟರವರೆಗೆ ಟೆಂಡರ್ ಪ್ರಕ್ರಿಯೆ ಮುಂದುವರಿಸಬಾರದು ಎಂದು ಕಾರ್ಯಪಾಲಕ ಎಂಜಿನಿಯರ್‌ಗೆ ಆಯಕ್ತರು ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.