ADVERTISEMENT

ರೀಚ್‌ 4ಬಿ: ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ

ನಮ್ಮ ಮೆಟ್ರೊ: ಯಲಚೇನಹಳ್ಳಿ– ಅಂಜನಾಪುರ ವಿಸ್ತರಿತ ಮಾರ್ಗ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 21:05 IST
Last Updated 18 ನವೆಂಬರ್ 2020, 21:05 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯ ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಬುಧವಾರ ಪರಿಶೀಲನೆ ನಡೆಸಿತು.

ಈ ಮಾರ್ಗದಲ್ಲಿ ಬರುವ ಐದು ನಿಲ್ದಾಣಗಳ ಪೈಕಿ ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿವರೆಗೆ ಐದು ಜನರ ತಂಡ ಟ್ರಾಲಿಯಲ್ಲಿ ತೆರಳಿತು. ತಂಡವು ತಲಘಟ್ಟಪುರ, ಅಂಜನಾಪುರ ಟೌನ್‌ಷಿಪ್ ನಿಲ್ದಾಣಗಳವರೆಗೆ ಗುರುವಾರ ಪರಿಶೀಲನೆ ನಡೆಸಲಿದೆ. ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೊ ರೈಲಿನಲ್ಲಿ ಸಂಚರಿಸಿ, ತಪಾಸಣೆ ಮಾಡಲಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಂಡವನ್ನು ಬರಮಾಡಿಕೊಂಡರು. ಹಳಿ ಅಳವಡಿಕೆ, ಸಿವಿಲ್ ಕಾಮಗಾರಿಗಳು, ಆಪತ್ಕಾಲದ ತುರ್ತು ನಿರ್ಗಮನ ವ್ಯವಸ್ಥೆ ಮತ್ತಿತರ ಸುರಕ್ಷತಾ ಅಂಶಗಳ ಬಗ್ಗೆ ಈ ತಂಡ ವಿವರಣೆ ಪಡೆಯಿತು.

ADVERTISEMENT

ಸಿಗ್ನಲಿಂಗ್, ಗರಿಷ್ಠ ವೇಗದಲ್ಲಿ ರೈಲು ಸಂಚಾರ, ಪ್ರಯಾಣಿಕರ ಸುರಕ್ಷತೆ ಇನ್ನಿತರ ತಾಂತ್ರಿಕ ಅಂಶಗಳನ್ನು ಗುರುವಾರ ಪರೀಕ್ಷಿಸಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಕಾರಣ, ಹಸಿರು ಮಾರ್ಗದಲ್ಲಿ ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವೆ ನ. 19ರವರೆಗೆ ಮೆಟ್ರೊ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. 20ರಿಂದ ಎಂದಿನಂತೆ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸೇವೆ ಪುನರಾರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.