ADVERTISEMENT

ಪ್ರಜಾವಾಣಿ ಓದಿ ಉದ್ಯಮಿಯಾದೆ: ಸಿಎನ್ಆರ್ ಸಮೂಹದ ಅಧ್ಯಕ್ಷ ವಿ.ರಾಮಸ್ವಾಮಿ

ಪತ್ರಿಕೆಯ ‘ಮಾಸ್ಟರ್‌ಮೈಂಡ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:46 IST
Last Updated 27 ಸೆಪ್ಟೆಂಬರ್ 2021, 18:46 IST
‘ಮಾಸ್ಟರ್‌ಮೈಂಡ್‌’ ಬಿಡುಗಡೆ ಸಂದರ್ಭದಲ್ಲಿ ಪ್ರಾಂಶುಪಾಲ ಬಾಲಕೃಷ್ಣಯ್ಯ, ವಿ.ರಾಮಸ್ವಾಮಿ, ಜಗನ್ನಾಥ ಜೋಯಿಸ್, ಪ್ರಾಧ್ಯಾಪಕ ಚಂದ್ರಶೇಖರ್ ಇದ್ದರು
‘ಮಾಸ್ಟರ್‌ಮೈಂಡ್‌’ ಬಿಡುಗಡೆ ಸಂದರ್ಭದಲ್ಲಿ ಪ್ರಾಂಶುಪಾಲ ಬಾಲಕೃಷ್ಣಯ್ಯ, ವಿ.ರಾಮಸ್ವಾಮಿ, ಜಗನ್ನಾಥ ಜೋಯಿಸ್, ಪ್ರಾಧ್ಯಾಪಕ ಚಂದ್ರಶೇಖರ್ ಇದ್ದರು   

ನೆಲಮಂಗಲ: ‘ಮಾರುಕಟ್ಟೆ ಸ್ಥಿತಿಗತಿ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುವ ಮಾಹಿತಿ, ಟೆಂಡರ್ ಆಹ್ವಾನಗಳು, ವಾಣಿಜ್ಯ ಪುರವಣಿ ಲೇಖನಗಳು ಮತ್ತು ಧರ್ಮಸ್ಥಳ ರುಡ್‌ಸೆಟ್ ಸಂಸ್ಥೆಯ ಮಾರ್ಗದರ್ಶನದಿಂದ ನಾನು ಯಶಸ್ವಿ ಉದ್ಯಮಿಯಾದೆ’ ಎಂದು ಇಲ್ಲಿನ ಧರ್ಮಸ್ಥಳ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಸಿಎನ್ಆರ್ ಸಮೂಹದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿ ಆಗಿರುವ‘ಪ್ರಜಾವಾಣಿ’ಯ ‘ಮಾಸ್ಟರ್‌ಮೈಂಡ್‌’ ಆವೃತ್ತಿಯನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮಾರ್ಗದರ್ಶನ ಇಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿಲ್ಲ. ಇನ್ನೂ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಮಾಧ್ಯಮ ಕ್ಷೇತ್ರದಲ್ಲೇ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ಬರುವ ಆಡಿಯೊ ಮತ್ತು ವಿಡಿಯೊ ಸಹಿತ ವಿಷಯಗಳು ಪರೀಕ್ಷೆಗಳಿಗಷ್ಟೆ ಅಲ್ಲದೆ, ಜೀವನಕ್ಕೂ ಸಹಕಾರಿಯಾಗಿವೆ. ‘ಪ್ರಜಾವಾಣಿ’ ಸುದ್ದಿ ಬಿತ್ತರಿಸುವುದಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಇನ್ನಿತರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ’ ಎಂದರು.

ADVERTISEMENT

ಪ್ರಾಂಶುಪಾಲ ಬಾಲಕೃಷ್ಣಯ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ಸಂಚಾರಿ ಕೈಪಿಡಿಯಾಗಿದೆ ಎಂದರು.

‘ಪ್ರಜಾವಾಣಿ’ ಪ್ರಸರಣ ವಿಭಾಗದ ಉಪ ಮುಖ್ಯ ವ್ಯವಸ್ಥಾಪಕ ಜಗನ್ನಾಥ್ ಜೋಯಿಸ್ ‘ಮಾಸ್ಟರ್‌ಮೈಂಡ್‌’ ಪಠ್ಯಕ್ರಮಗಳನ್ನು ಎಳೆಎಳೆಯಾಗಿ ವಿವರಿಸಿದರು. ಪ್ರಾಧ್ಯಾಪಕ ಚಂದ್ರಶೇಖರ್ ಇದ್ದರು.

ವಿದ್ಯಾರ್ಥಿನಿ ಎಸ್.ಕುಸುಮಾ ಅವರು ಉದ್ಯೋಗಾವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮತ್ತು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ‘ಮಾಸ್ಟರ್‌ ಮೈಂಡ್‌’ ಗುರುವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.