ADVERTISEMENT

‘ಪುಸ್ತಕ ಲೋಕ’ದಲ್ಲಿ ಓದುಗರ ಸಂಭ್ರಮ

ಸಪ್ನ ಬುಕ್‌ ಹೌಸ್‌ನಲ್ಲಿ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 19:00 IST
Last Updated 24 ಏಪ್ರಿಲ್ 2022, 19:00 IST
ಕಾರ್ಯಕ್ರಮದಲ್ಲಿ ಕವಯತ್ರಿ ನಂದಿನಿ ಹೆದ್ದುರ್ಗ, ಕವಿ ಬಿ.ಆರ್. ಲಕ್ಷ್ಮಣರಾವ್, ಟಿ.ಎನ್. ಸೀತಾರಾಮ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ವಿಶ್ವೇಶ್ವರ ಭಟ್‌, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ನಟಿ ಆರೋಹಿ ನಾರಾಯಣ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕವಯತ್ರಿ ನಂದಿನಿ ಹೆದ್ದುರ್ಗ, ಕವಿ ಬಿ.ಆರ್. ಲಕ್ಷ್ಮಣರಾವ್, ಟಿ.ಎನ್. ಸೀತಾರಾಮ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ವಿಶ್ವೇಶ್ವರ ಭಟ್‌, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ನಟಿ ಆರೋಹಿ ನಾರಾಯಣ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವ ಪುಸ್ತಕ ದಿನವಾದ ಶನಿವಾರ ಗಾಂಧಿನಗರದ ‘ಸಪ್ನ ಬುಕ್‌ ಹೌಸ್‌’ನಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸ್ತಕರ ದಂಡೇ ಸೇರಿತ್ತು. ಪುಸ್ತಕಗಳ ಜತೆಗಿನ ಪ್ರೀತಿ, ಮಧುರ ಅನುಭವಗಳನ್ನು ಅವರು ಹಂಚಿಕೊಂಡರು. ಕವನಗಳನ್ನು ಓದಿ ಸಂಭ್ರಮಪಟ್ಟರು.

ಬದಲಾಗುತ್ತಿರುವ ಪುಸ್ತಕೋದ್ಯಮ, ಓದುಗರ ಅಭಿರುಚಿ ಸೇರಿದಂತೆ ಜಗತ್ತಿನಾದ್ಯಂತ ಇರುವ ಪುಸ್ತಕ ಲೋಕದ ವಿವಿಧ ಆಯಾಮಗಳನ್ನು ನಗರದ ಸಪ್ನ ಬುಕ್‌ ಹೌಸ್‌ನಲ್ಲಿ ಆಯೋಜಿಸಿದ್ದ ‘ಪುಸ್ತಕ ಲೋಕ’ ಕಾರ್ಯಕ್ರಮ ತೆರೆದಿಟ್ಟಿತು. ನಿರ್ದೇಶಕ ಟಿ.ಎನ್. ಸೀತಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ‘ಪುಸ್ತಕಗಳು ಸಹ ಡಿಜಿಟಲೀಕರಣವಾಗುತ್ತಿವೆ. ಬದಲಾವಣೆಗೆ ತಕ್ಕಂತೆ ಹೊಂದುಕೊಳ್ಳುವುದು ಅನಿವಾರ್ಯ. ತಂತ್ರಜ್ಞಾನ ಬದಲಾದರೂ ಪುಸ್ತಕಗಳು ಈ ಕಾಲದ ಅಗತ್ಯ. ಉತ್ತಮ ಗ್ರಂಥಾಲಯಗಳಿದ್ದರೆ ಅದುವೇ ಶ್ರೀಮಂತ ದೇಶ’ ಎಂದು ಪ್ರತಿಪಾದಿಸಿದರು.

ADVERTISEMENT

‘ನಾವು ಪುಸ್ತಕ ಮುಟ್ಟದ ಅಥವಾ ಓದದ ದಿನವೇ ಇಲ್ಲ. ಪತ್ರಿಕೆಗಳನ್ನು ಓದುವುದು ಸಹ ಸಾಹಿತ್ಯದ ಜತೆಗಿನ ಸಾಂಗತ್ಯವನ್ನು ಬೆಳೆಸುತ್ತದೆ’ ಎಂದರು.

‘ನಮ್ಮ ಊರಿನಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾದಾಗ ಕೆಲವರು ದೇವಸ್ಥಾನ ನಿರ್ಮಿಸುವಂತೆ ಒತ್ತಾಯಿಸಿದ್ದರು. ಜನರನ್ನು ಓದಿಗೆ ಹಚ್ಚಬೇಕು ಎನ್ನುವುದು ಮುಖ್ಯ ಆಶಯವಾಗಿತ್ತು. ಈಗ ನಮ್ಮೂರಿನ ಗ್ರಂಥಾಲಯದಲ್ಲಿ 10 ಸಾವಿರ ಪುಸ್ತಕಗಳಿವೆ. ಹಳ್ಳಿಗಳಲ್ಲಿ ಏನೂ ಇಲ್ಲದಿದ್ದರೂ ಪುಟ್ಟ ಗ್ರಂಥಾಲಯ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್, ‘ಕನ್ನಡ ಪುಸ್ತಕೋದ್ಯಮಕ್ಕೆ ಈಗ ಸುವರ್ಣ ಯುಗ. ಕನ್ನಡ ಲೇಖಕರು ಸಂಭ್ರಮಪಡುವಷ್ಟು ದೊಡ್ಡ ಓದುಗ ಬಳಗವೇ ಇದೆ. ಕನ್ನಡ ಲೋಕದಲ್ಲಿ ಪುಸ್ತಕಗಳಿಗೆ ಉತ್ತಮ ಮಾರುಕಟ್ಟೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.