ADVERTISEMENT

ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಸರ್ಕಾರ ಶರಣು: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 19:02 IST
Last Updated 30 ಜುಲೈ 2025, 19:02 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ‘ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ರಿಯಲ್ ಎಸ್ಟೇಟ್ ಕುಳಗಳ ಕಪಿಮುಷ್ಠಿಗೆ ಕೊಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ.

ಪ್ರಜಾವಾಣಿಯಲ್ಲಿ ಪ್ರಕಟವಾದ ‘11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್’ ವಿಶೇಷ ವರದಿಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅಶೋಕ ಅವರು, ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ–2024ರ (ಕೆಟಿಸಿಡಿಎ) ಅಡಿ ಇರುವ ಎಲ್ಲ ಕೆರೆಗಳಿಗೆ 30 ಮೀಟರ್‌ ಬಫರ್‌ ಝೋನ್‌ ಇರಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಸಂರಕ್ಷಿತ ಪ್ರದೇಶವನ್ನು ಕಡಿಮೆ ಮಾಡಲು ಹೊರಟಿರುವ ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾಗೆ ಶರಣಾಗಿ ಬೆಂಗಳೂರು ನಗರವನ್ನು ಸರ್ವನಾಶ ಮಾಡಲು ಪಣ ತೊಟ್ಟಿದೆ’ ಎಂದು ಟೀಕಿಸಿದ್ದಾರೆ.

‘ಈ ತಿದ್ದುಪಡಿ ಜಾರಿಯಾದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 172 ಕೆರೆಗಳ ಬಫರ್‌ ಝೋನ್‌ 30 ಮೀಟರ್‌ಗಿಂತ ಕಡಿಮೆಯಾಗಲಿದ್ದು, ಪ್ರಕೃತಿ ವಿಕೋಪಗಳಿಗೆ ದಾರಿ ಮಾಡಿಕೊಡಲಿದೆ. ಒಂದು ಕಡೆ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಹೈಕೋರ್ಟ್‌ ಹಲವು ಬಾರಿ ಆದೇಶ ನೀಡಿದ್ದರೂ ಕೆರೆಗಳ ಒತ್ತುವರಿಯನ್ನು ತೆರವು ಮಾಡಿಲ್ಲ. ಬಫರ್‌ ಝೋನ್‌ ಅಂತೂ ಇಲ್ಲವೇ ಇಲ್ಲ. ಈಗ ಕೆರೆಗಳ ‘ಸಂರಕ್ಷಿತ ವಲಯ’ವನ್ನು ಕಡಿಮೆ ಮಾಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ‘ಬ್ರ್ಯಾಂಡ್ ಬೆಂಗಳೂರಿನ’ ಭವಿಷ್ಯಕ್ಕೆ ಮಾರಕವಾಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇನೆ ಎಂದು ಬೆಂಗಳೂರಿನ ಕೆರೆಗಳನ್ನು ಭೂ ಮಾಫಿಯಾಗೆ ಧಾರೆ ಎರೆದು ಕೊಡುತ್ತಿದ್ದಾರೆ. ಅವರ ಭೂದಾಹಕ್ಕೆ ಇನ್ನೆಷ್ಟು ಕೆರೆಗಳು ಬಲಿಯಾಗಬೇಕು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.