ADVERTISEMENT

ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಿಲ್ಲಿಸದಿದ್ದರೆ ದಂಗೆ: ಒಕ್ಕೂಟ ಎಚ್ಚರಿಕೆ

ಶೋಷಿತ ಸಮುದಾಯಗಳ ಸಮಾವೇಶ ನಡೆಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:42 IST
Last Updated 30 ಜುಲೈ 2024, 15:42 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ ಕುತಂತ್ರವನ್ನು ಬಿಜೆಪಿ, ಜೆಡಿಎಸ್ ನಾಯಕರು ನಿಲ್ಲಿಸಬೇಕು. ಅವರ ಹೆಸರಿಗೆ ಕಳಂಕ ತರುವ ಯತ್ನವನ್ನು ಮುಂದುವರಿಸಿದರೆ ದಂಗೆ ಏಳಬೇಕಾಗುತ್ತದೆ’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ‘ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಅಧಿಕಾರ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಹೀಗಾಗಿ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಹೆಸರನ್ನು ತಳಕು ಹಾಕಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ದೇಶದ ಏಕೈಕ ನಾಯಕ ಸಿದ್ದರಾಮಯ್ಯ’ ಎಂದು ಅವರು ಹೇಳಿದರು.

‘ಹಿಂದುಳಿದ ವರ್ಗದ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮ ಸಿಂಗ್ ಅಧಿಕಾರದಲ್ಲಿದ್ದಾಗಲೂ ಅವರ ವಿರುದ್ಧ ಇಂತಹದೇ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯ ಜಾಗೃತವಾಗಿದೆ. ಬಿಜೆಪಿ–ಜೆಡಿಎಸ್‌ ನಾಯಕರು ಕುತಂತ್ರ ನಿಲ್ಲಿಸದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ಹಾಗೂ ಶೋಷಿತ ಸಮುದಾಯಗಳ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಹಿಂದುಳಿದ ವರ್ಗದ ನಾಯಕತ್ವವನ್ನು ಕೊನೆಗಾಣಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವರ ವಿರುದ್ಧ ಮುಗಿ ಬಿದ್ದಿದ್ದಾರೆ. ಹಿಂದುಳಿದವರ ದನಿ ಅಡಗಿಸಲು ಷಡ್ಯಂತ್ರ ರೂಪಿಸಿದವರೇ ಸ್ವತಃ ಕಳಂಕಿತರು. ಇವರ ಮೇಲಿನ ಆರೋಪಗಳನ್ನೂ ನಾವು ಬಯಲಿಗೆ ಎಳೆಯುತ್ತೇವೆ’ ಎಂದರು. 

ಒಕ್ಕೂಟದ ಸಂಚಾಲಕರಾದ ಅನಂತನಾಯ್ಕ್ ಎನ್., ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಅಬ್ದುಲ್ ಮನಾನ್‌ಸೇಠ್, ಬಿ.ಟಿ. ಲಲಿತಾ ನಾಯಕ್, ಸದಸ್ಯ ಆದರ್ಶ್ ಯಲ್ಲಪ್ಪ, ಕೆ.ವೆಂಕಟಸುಬ್ಬರಾಜು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.