ADVERTISEMENT

ಅಹೋರಾತ್ರಿ ಪಾರಾಯಣ, ಮುಸ್ಲಿಮರಿಂದಲೂ ನಮನ

48 ದಿನದ ಬಳಿಕ ನೂತನ ಬೃಂದಾವನ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 21:23 IST
Last Updated 30 ಡಿಸೆಂಬರ್ 2019, 21:23 IST
ಬೆಂಗಳೂರಿನ ವಿದ್ಯಾಪೀಠದಲ್ಲಿರುವ ವಿಶ್ವೇಶತೀರ್ಥರ ಬೃಂದಾವನ
ಬೆಂಗಳೂರಿನ ವಿದ್ಯಾಪೀಠದಲ್ಲಿರುವ ವಿಶ್ವೇಶತೀರ್ಥರ ಬೃಂದಾವನ   

ಬೆಂಗಳೂರು:ಇಹಲೋಕ ತ್ಯಜಿಸಿ, ಇಲ್ಲಿನ ವಿದ್ಯಾಪೀಠದ ಆವರಣದಲ್ಲಿನ ಬೃಂದಾವನದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಇಚ್ಛೆಯಂತೆ ಅಹೋರಾತ್ರಿ ವೇದ ಪಾರಾಯಣ ಆರಂಭವಾಗಿದ್ದು, 10 ದಿನಗಳ ಕಾಲ ಇದು ಮುಂದುವರಿಯಲಿದೆ.

ವಿದ್ಯಾಪೀಠದ ವಿದ್ಯಾರ್ಥಿಗಳು ಭಾನುವಾರ ಮಧ್ಯರಾತ್ರಿಯಿಂದಲೇ ವೇದಪಾರಾಯಣ ಆರಂಭಿಸಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಇದು ಹತ್ತು ದಿನಗಳ ಕಾಲ ಮುಂದುವರಿಯಲಿದೆ.

ಶ್ರೀಗಳ ಬೃಂದಾವನ ನೋಡಲು ಎಲ್ಲ ಧರ್ಮಗಳ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಬೃಂದಾವನದ ಮೇಲ್ಭಾಗದಲ್ಲಿ ತುಳಸಿ ಗಿಡ ನೆಡಲಾಗಿದ್ದು, ಪಕ್ಕದಲ್ಲಿ ಶ್ರೀ ಗಳ ಭಾವಚಿತ್ರ ಇಡಲಾಗಿದೆ.
ಒಂದು ವರ್ಷ ಕಾಲ ಇದೇ ರೀತಿಯಲ್ಲಿ ಬೃಂದಾವನ ಇರಲಿದ್ದು, ಬಳಿಕ ಮಂತ್ರಾಲಯ ಮಾದರಿಯಲ್ಲಿ ಭವ್ಯ ಬೃಂದಾವನ ನಿರ್ಮಿಸುವ ಯೋಜನೆ ಭಕ್ತರಿಗಿದೆ.

ADVERTISEMENT
ವಿಶ್ವೇಶತೀರ್ಥರ ಬೃಂದಾವನದ ಸಮೀಪ ವೇದ ಪಾರಾಯಣ

12 ದಿನ ಮಂತ್ರ ಪಠಣ

‘ಗುರುಗಳು ಹರಿಪಾದ ಸೇರಿ ಒಂದು ದಿನ ಕಳೆದು ಹೋಯ್ತು.ಎಲ್ಲರೂ ಸೇರಿ ನಿನ್ನೆ ಗುರುಗಳ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇನ್ನು ಹನ್ನೆರಡು ದಿನಗಳ ಕಾಲ ಮಂತ್ರ ಪಠನೆ, ಪಾರಾಯಣ, ಭಜನೆ, ವಿದ್ವಾಂಸರ ಗೋಷ್ಠಿ ಗಳು ನಡೆಯಲಿವೆ’ ಎಂದು ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನತೀರ್ಥರು ಹೇಳಿದರು.

‘ನಿನ್ನೆ ಸರ್ಕಾರ ಕುಶಾಲುತೋಪು ಸೇರಿದಂತೆ ಸಕಲಸರ್ಕಾರಿ ಗೌರವ ನೀಡಿದೆ.ಇದರ ಬಗ್ಗೆ ಹೆಮ್ಮೆ ಪಡುತ್ತೇವೆ. ಸರ್ಕಾರವನ್ನು, ಅಧಿಕಾರಿಗಳನ್ನು ಅಭಿನಂದಿಸುತ್ತೇವೆ.ನಾಡಿನ ಸಮಸ್ತ ಭಕ್ತರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಗುರುಗಳ, ಕೃಷ್ಣನ ಅನುಗ್ರಹ ಲಭಿಸಲಿ’ ಎಂದು ನುಡಿದರು.

ಅನ್ನಸಂತರ್ಪಣೆ, ಉಚಿತ ಚಿಕಿತ್ಸೆ

ವಿದ್ಯಾಪೀಠ ಸೇರಿದಂತೆ ವಿವಿಧೆಡೆ ಸತತ 12 ದಿನಮಂತ್ರ ಪಠನೆ, ಹೋಮಗಳು ನಡೆಯುತ್ತವೆ. 13ನೇ ದಿನಬೆಂಗಳೂರಿನಲ್ಲಿ ಬಡವರು ನೆಲೆಸಿರುವ ಸ್ಥಳಕ್ಕೆ ತೆರಳಿಅನ್ನಸಂತರ್ಪಣೆ ನಡೆಸಲಾಗುವುದು ಎಂದು ನಿವೃತ್ತ ಪ್ರಾಚಾರ್ಯ ಹರಿದಾಸ ಭಟ್ ಹೇಳಿದರು.

ಶ್ರೀಗಳು ಸ್ಥಾಪಿಸಿದ ಆಸ್ಪತ್ರೆಯಲ್ಲಿ 13ನೇ ದಿನ ಉಚಿತ ಸೇವೆ, ಚಿಕಿತ್ಸೆ ನೀಡಲಾಗುವುದು.ವಿರಜಾ ಹೋಮ ಸೇರಿದಂತೆ ಹಲವು ಹೋಮಗಳು 12 ದಿನ ನಡೆಯಲಿದೆ.13ನೇ ದಿನ ವಿದ್ವಾಂಸರನ್ನು ಪುರಸ್ಕರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.