ADVERTISEMENT

Bengaluru Metro | ಮೆಟ್ರೊ: ಕನ್ನಡಿಗರಿಗೆ ಇಲ್ಲವೇ ನೌಕರಿ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 23:27 IST
Last Updated 16 ಮಾರ್ಚ್ 2025, 23:27 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ನಮ್ಮ ಮೆಟ್ರೊ ರೈಲು ಚಾಲಕರ (ಲೋಕೊ ಪೈಲಟ್‌) ಹುದ್ದೆಗೆ ಬಿಎಂಆರ್‌ಸಿಎಲ್‌ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆದರೆ, ಬಿಎಂಆರ್‌ಸಿಎಲ್‌ ವಿಧಿಸಿರುವ ಷರತ್ತು ಕನ್ನಡಿಗರನ್ನು ಹೊರಗಿಡಲಿದೆ.

ಹಿಂದೆ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗುತ್ತಿತ್ತು. ಅವರು ಆನಂತರ ನುರಿತ ಚಾಲಕರಾಗುತ್ತಿದ್ದರು. ಈ ಬಾರಿ ಆ ಪದ್ಧತಿಯನ್ನು ಬಿಎಂಆರ್‌ಸಿಎಲ್‌ ಕೈಬಿಟ್ಟಿದೆ. ಎಂಜಿನಿಯರಿಂಗ್‌ ಟ್ರೇಡ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದು, ಯಾವುದೇ ಮೆಟ್ರೊದಲ್ಲಿ ಚಾಲಕರಾಗಿ ಮೂರು ವರ್ಷ ಅನುಭವ ಇರುವವರು ಅರ್ಜಿ ಸಲ್ಲಿಸಲು ಅರ್ಹರು ಎಂದು ತಿಳಿಸಿದೆ. ವಿದ್ಯಾರ್ಹತೆಯ ಷರತ್ತು ಸರಿ ಇದೆ. ಆದರೆ, ಅನುಭವ ಬೇಕು ಎಂಬುದೇ ಕನ್ನಡಿಗರು ಅರ್ಜಿ ಹಾಕಲು ತೊಡಕು ಉಂಟು ಮಾಡಿದೆ.

ADVERTISEMENT

‘50 ಚಾಲಕ ಹುದ್ದೆಗಳ ಭರ್ತಿಗೆ ಬಿಎಂಆರ್‌ಸಿಎಲ್ ಅರ್ಜಿ ಆಹ್ವಾನ ಮಾಡಿದೆ. ಗುತ್ತಿಗೆ ಆಧಾರದಲ್ಲಿ 5 ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕೆಲಸದ ಬದ್ಧತೆಯ ಮೇರೆಗೆ ಮುಂದುವ
ರಿಸುವ ಅವಕಾಶ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೂರು ವರ್ಷ ಅನುಭವ ಇರಬೇಕು ಎಂದರೆ ಅವರು ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್‌ ಸಹಿತ ಬೇರೆ ರಾಜ್ಯಗಳಲ್ಲಿ ಮೆಟ್ರೊ ಚಲಾಯಿಸಿದವರಾಗಿರುತ್ತಾರೆ. ಏಕೆಂದರೆ ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೇರೆ ಕಡೆ ಮೆಟ್ರೊ ವ್ಯವಸ್ಥೆ ಇಲ್ಲ’ ಎನ್ನುತ್ತಾರೆ ಬಿಎಂಆರ್‌ಸಿಎಲ್‌ ನಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಉದ್ಯೋಗಿಗಳು.

‘ಕನ್ನಡಿಗರನ್ನು ಉದ್ಯೋಗದಿಂದ ದೂರ ಇಡುವ ಈ ಅಧಿಸೂಚನೆ ಕುರಿತು ಬಿಎಂಆರ್‌ಸಿಎಲ್‌ ಪ್ರಧಾನ ವ್ಯವಸ್ಥಾಪಕರಿಗೆ (ಎಚ್‌ಆರ್‌) ತಿಳಿಸಿದ್ದೇವೆ’ ಎಂದು ಬಿಎಂಅರ್‌ಸಿಎಲ್‌ ಕನ್ನಡಿಗರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಬಿಎಂಆರ್‌ಸಿಎಲ್‌ ಆಡಳಿತ ನಡೆಸುವವರು, ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ಇರುವವರೆಲ್ಲ ತಮಿಳು, ಹಿಂದಿ ಮತ್ತು ಇತರ ಭಾಷಿಕರು. ಮೆಟ್ರೊ ಚಾಲಕರು, ಸಿವಿಲ್‌ ಎಂಜಿನಿಯರ್‌, ಎಲೆಕ್ಟ್ರಿಕ್‌ ಎಂಜಿನಿಯರ್, ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌ ಮತ್ತು ಟೆಲಿಕಮ್ಯುನಿಕೇಷನ್‌ ಎಂಜಿನಿಯರ್‌ಗಳ ಸಹಿತ ಕೆಲಸ ಮಾಡುವ ನೌಕರರಲ್ಲಿ ಶೇಕಡ 90ರಷ್ಟು ಕನ್ನಡಿಗರಿದ್ದಾರೆ. ಈಗ ಅನುಭವದ ಷರತ್ತು ವಿಧಿಸುವ ಮೂಲಕ ಸಣ್ಣ ಹುದ್ದೆಗಳಿಗೂ ಪರಭಾಷಿಕರನ್ನು ತುಂಬಲು ಬಿಎಂಆರ್‌ಸಿಎಲ್‌ ಆಡಳಿತ ಹೊರಟಿದೆ’ ಎಂದು ನಿಗಮದ ನೌಕರರು ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಕಣ್ಣೊರೆಸುವ ತಂತ್ರ. ಐದು ವರ್ಷಗಳ ಬಳಿಕ ಅವರ ಕೆಲಸ ನಿರ್ವಹಣೆಯನ್ನು ನೋಡಿ ಮುಂದುವರಿಸುವ ಅವಕಾಶ ಇದೆ ಎಂದು ಬಿಎಂಆರ್‌ಸಿಎಲ್‌ ಈ ಬಗ್ಗೆ ನೀಡಿರುವ ಜಾಹೀರಾತಿನಲ್ಲಿ ತಿಳಿಸಿದೆ. ಹಳದಿ ಮಾರ್ಗ ಇನ್ನೆರಡು ತಿಂಗಳಲ್ಲಿ ಆರಂಭವಾಗುತ್ತಿರುವುದರಿಂದ ತುರ್ತಾಗಿ ಚಾಲಕರು ಬೇಕು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡುತ್ತಾರೆ. ಹಳದಿ ಮಾರ್ಗ ತಯಾರಾಗಿ ಆರು ತಿಂಗಳು ಕಳೆದಿದೆ. ಅದಕ್ಕಿಂತ ಮೊದಲೇ ರೈಲು ಎಷ್ಟು ಬೇಕು ಅಷ್ಟನ್ನು ತರಿಸಿಟ್ಟುಕೊಳ್ಳಬೇಕಿತ್ತು. ಅಗತ್ಯಕ್ಕೆ ಬೇಕಾದಷ್ಟು ಚಾಲಕರನ್ನು ನೇಮಕ ಮಾಡಿಕೊಳ್ಳಬೇಕಿತ್ತು. ಈಗ ಈ ನೆಪದಲ್ಲಿ ಕನ್ನಡಿಗರನ್ನು ಹೊರಗಿಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾತ್ಕಾಲಿಕ ವ್ಯವಸ್ಥೆ

ಇವು ಕೇವಲ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ತಾತ್ಕಾಲಿಕ ಹುದ್ದೆಗಳು. ಶಾಶ್ವತವಾಗಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವವರೆಗೆ ನಮ್ಮ ಮೆಟ್ರೊ ಚಾಲಕರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಕಾಯಂ ಹುದ್ದೆ ತುಂಬಲು ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಂಡು ತರಬೇತಿ ನೀಡಲು ಒಂದು ವರ್ಷಕ್ಕಿಂತ ಅಧಿಕ ಸಮಯ ಹಿಡಿಯುತ್ತದೆ. ಹಿಂದೆ ನೇಮಕಾತಿ ಮಾಡಿಕೊಂಡಿದ್ದರೂ ಅಗತ್ಯಕ್ಕೆ ಬೇಕಾದಷ್ಟು ಹುದ್ದೆ ತುಂಬಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡಕ್ಕೆ ಬಿಎಂಆರ್‌ಸಿಎಲ್‌ ಆದ್ಯತೆ ನೀಡುತ್ತದೆ. ಈಗಲೂ ಬೇರೆ ಕಡೆ ಅನುಭವ ಪಡೆದಿರುವ ಕನ್ನಡಿಗರು ಬರುವ ಸಾಧ್ಯತೆಯೂ ಇದೆ. ಅಲ್ಲದೇ ನೇಮಕ ಮಾಡುವ, ಮಾಡಿಕೊಳ್ಳದಿರುವ ಹಕ್ಕನ್ನು
ಬಿಎಂಆರ್‌ಸಿಎಲ್‌ ಕಾಯ್ದಿರಿಸಿಕೊಂಡಿದೆ ಎಂದು
ಹೇಳಿದ್ದಾರೆ.

‘ಅಧಿಸೂಚನೆ ಹೊರಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ’

‘ನಮ್ಮ ಮೆಟ್ರೊ ಚಾಲಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರನ್ನು ಹೊರಗಿಡುವ ಹುನ್ನಾರದ ಷರತ್ತುಗಳನ್ನು ವಿಧಿಸಿ ಅಧಿಸೂಚನೆ ಹೊರಡಿಸಿರುವ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬಿಎಂಆರ್‌ಸಿಎಲ್‌ ನೌಕರರ ಯೂನಿಯನ್‌ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಆ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಹೊಂದಿರುವ ಕನ್ನಡಿಗರು ಅರ್ಜಿ ಸಲ್ಲಿಸದಂತೆ ಮಾಡಲು ಹೊರಟಿರುವ ಬಿಎಂಆರ್‌ಸಿಎಲ್‌ನ ನಾಚಿಗೇಡಿನ ಕೃತ್ಯ ಕನ್ನಡಿಗರಿಗೆ ನೋವುಂಟು ಮಾಡಿದೆ. ಚೆನ್ನೈ, ಹೈದರಾಬಾದ್, ಕೊಚ್ಚಿ ಮೆಟ್ರೊ ರೈಲುಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಉತ್ತರ ಭಾರತೀಯರು ಮಾತ್ರ ಅರ್ಜಿ ಸಲ್ಲಿಸುವಂತೆ ಮಾಡುವ ಈ ಅಧಿಸೂಚನೆಯನ್ನು ಹಿಂದಕ್ಕೆ ‍ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಉಪ ಮುಖ್ಯಮಂತ್ರಿಯವರೂ ಈ ಅಧಿಸೂಚನೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೆಟ್ರೊ ಅಧಿಕಾರಿಗಳ ಚೀನಾ ಪ್ರವಾಸ

ಬಿಎಂಆರ್‌ಸಿಎಲ್‌ನ ಮೂವರು ಹಿರಿಯ ಅಧಿಕಾರಿಗಳು ಚೀನಾ ಪ್ರವಾಸಕ್ಕೆ ಹೊರಟಿದ್ದಾರೆ.

ಚೀನಾಕ್ಕೆ ಪ್ರಯಾಣ ಬೆಳೆಸಲಿರುವ ಅಧಿಕಾರಿಗಳೆಂದರೆ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್‌, ಉಪಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ಬಿಎಂಆರ್‌ಸಿಎಲ್‌ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಮತ್ತು ಬಿಎಂಆರ್‌ಸಿಎಲ್‌ನ ಯೋಜನಾ ನಿರ್ದೇಶಕ ಜಿತೇಂದ್ರ ಜಾ. ಇವರು ಇದೇ 24ರಂದು ಪ್ರಯಾಣ ಬೆಳೆಸಲಿದ್ದು 29ರವರೆಗೆ ಚೀನಾದಲ್ಲಿರಲಿದ್ದಾರೆ.

ನಮ್ಮ ಮೆಟ್ರೊದ ನೇರಳೆ ಮಾರ್ಗಕ್ಕೆ 216 ಕೋಚ್‌ಗಳ ತಯಾರಿಕೆಗೆ ಚೀನಾದ ಸಿಆರ್‌ಆರ್‌ಸಿ ನಾನ್ಜಿಂಗ್‌ ಪುಝೆನ್‌ ಕೋ ಲಿಮಿಟೆಡ್‌ಗೆ ಟೆಂಡರ್‌ ನೀಡಲಾಗಿತ್ತು. ಕೋಚ್‌ಗಳನ್ನು ತ್ವರಿತವಾಗಿ ತಯಾರಿಸಿ ಬೆಂಗಳೂರಿಗೆ ಕಳುಹಿಸುವಂತೆ ಮನವಿ ಮಾಡುವ ಏಕೈಕ ಉದ್ದೇಶದಿಂದ ಈ ಅಧಿಕಾರಿಗಳು ಪ್ರವಾಸಕ್ಕೆ ಹೋಗಲಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಅಂತಿಮವಾಗಿ ಭಾರತ ಸರ್ಕಾರದ ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಮೆಟ್ರೊ ಇದೇ ಮೊದಲಬಾರಿಗೆ ಚೀನಾ ನಿರ್ಮಿತ ಕೋಚ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಚೀನಿ ನಿರ್ಮಿತ ಆರು ಮಾದರಿ ಕೋಚ್‌ಗಳು ಈಗಾಗಲೇ ಬಂದಿವೆ. 216 ಕೋಚ್‌ಗಳ ಟೆಂಡರ್‌ ಮೊತ್ತ ₹1,578 ಕೋಟಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.